ಕೆಜಿಎಫ್, 2022ರ ಬಹು ನಿರೀಕ್ಷಿತ ಸಿನಿಮಾ. 2020ರಿಂದಲೂ ಕಾಯುತ್ತಿರೋ ಈ ಸಿನಿಮಾ ರಿಲೀಸ್ ಆಗುತ್ತಿರೋದು ಈ ವರ್ಷ ಏಪ್ರಿಲ್ 14ಕ್ಕೆ. ವರ್ಷದ ನಂ.1 ನಿರೀಕ್ಷಿತ ಸಿನಿಮಾ ಆಗಿರೋ ಕೆಜಿಎಫ್ ಚಾಪ್ಟರ್ 2ಗೆ ಎದುರಾಗಿ ಈಗಾಗಲೇ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಫಿಕ್ಸ್ ಆಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಈ ಬಗ್ಗೆ ಹೊಂಬಾಳೆ ಮತ್ತು ಯಶ್ ಅವರಿಗೆ ಸ್ಪಷ್ಟನೆ ನೀಡಿ ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ಮತ್ತೂ ಒಂದು ಸಿನಿಮಾ ಯಶ್`ಗೆ ಪೈಪೋಟಿ ಒಡ್ಡುತ್ತಿದೆ.
ತಮಿಳಿನ ಸ್ಟಾರ್ ವಿಜಯ್ ಅಭಿನಯದ ಬೀಸ್ಟ್ ಕೆಜಿಎಫ್ ಚಾಪ್ಟರ್2ಗೆ ಎದುರಾಗಿ ನಿಲ್ಲುವ ಸಾಧ್ಯತೆಗಳಿವೆ. ಬೀಸ್ಟ್ ಸಿನಿಮಾದ ಟೀಸರ್ ಹೊರಬಂದಿದ್ದು, ಏಪ್ರಿಲ್‍ನಲ್ಲಿ ರಿಲೀಸ್ ಎಂದು ಘೋಷಿಸಿದೆ ಚಿತ್ರತಂಡ. ಆದರೆ ಏಪ್ರಿಲ್‍ನಲ್ಲಿ ಯಾವ ದಿನ ಅನ್ನೋದನ್ನು ಹೇಳಿಲ್ಲ. ಒಟ್ಟಿನಲ್ಲಿ ಏಪ್ರಿಲ್ ದೊಡ್ಡ ಸ್ಟಾರ್ ಚಿತ್ರಗಳ ಹಬ್ಬವನ್ನೇ ಸೃಷ್ಟಿಸಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.