ಅಪ್ಪು ಅವರನ್ನು ಅವರು ಸಾಯುವ 3 ದಿನ ಮೊದಲು ಭೇಟಿಯಾಗಿದ್ದೆ. ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅಪ್ಪು ಸಿಕ್ಕಿದ್ದರು. ರಾಮು ಅವರನ್ನು ಕಳೆದುಕೊಂಡ ಮೇಲೆ ನಾನು ಹೋಗಿದ್ದ ಮೊದಲ ಕಾರ್ಯಕ್ರಮ ಅದು. ಇನ್ನೂ ದುಃಖದಲ್ಲಿಯೇ ಇದ್ದ ದಿನ. ಅಲ್ಲಿ ಸಿಕ್ಕಿದ್ದ ಅಪ್ಪು ನನ್ನನ್ನು ತಬ್ಬಿಕೊಂಡು ನೀವು ಹೀಗೆಲ್ಲ ಇರಬಾರದು. ರಾಮು ಎಲ್ಲಿಯೂ ಹೋಗಿಲ್ಲ. ಇಲ್ಲೇ ನಮ್ಮ ಸುತ್ತಮುತ್ತಲೇ ಇದ್ದಾರೆ. ದುಃಖದಿಂದ ಹೊರಬನ್ನಿ. ನಾನು ನಿಮ್ಮನ್ನು ಯಾವಾಗಲೂ ಚಾಮುಂಡಿ, ದುರ್ಗಿಯಂತೆಯೇ ನೋಡೋಕೆ ಬಯಸುತ್ತೇನೆ ಎಂದು ಸಾಂತ್ವನ ಹೇಳಿದ್ದರು.
ಅದಾಗಿ 3 ದಿನಕ್ಕೆ ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಬಂದಾಗ ನನಗೆ ಶಾಕ್. 3 ದಿನದ ಹಿಂದೆ ನನಗೆ ಧೈರ್ಯ ಹೇಳಿದ್ದವರು, ಈಗ ಅವರೇ ಇಲ್ಲ ಎಂದರೆ ನಂಬೋದು ಹೇಗೆ? ನನಗೆ ಕಷ್ಟವಾಗಿಬಿಟ್ಟಿತ್ತು. ಆ ದಿನ ಹಲವು ಚಾನೆಲ್ನವರು ನನಗೆ ಫೋನ್ ಮಾಡುತ್ತಿದ್ದರು. ನಾನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಆ ದಿನ ಯಾರ ಕರೆಯನ್ನೂ ಸ್ವೀಕರಿಸಲಿಲ್ಲ ಎಂದಿದ್ದಾರೆ ಮಾಲಾಶ್ರೀ.
ರಾಮು ಅವರ ಕೊನೆಯ ಸಿನಿಮಾ ಅರ್ಜುನ್ ಗೌಡ ಚಿತ್ರದ ಬಗ್ಗೆ ಮಾತನಾಡುತ್ತಾ ನಂಜುಂಡಿ ಕಲ್ಯಾಣ ಚಿತ್ರದ ಶೂಟಿಂಗ್ ವೇಳೆ ಆಗಿನ್ನೂ ಚಿಕ್ಕ ಹುಡುಗನಾಗಿದ್ದ ಅಪ್ಪು ಜೊತೆ ಕಣ್ಣಾಮುಚ್ಚಾಲೆ, ಗೋಲಿ ಆಡಿಕೊಂಡಿರುತ್ತಿದ್ದೆ. ಮೇಕಪ್ ಎಲ್ಲ ಹಾಳಾಗಿ ಬೆವರು ಸುರಿಸಿಕೊಂಡಿರುತ್ತಿದ್ದೆ. ಎಷ್ಟೋ ಬಾರಿ ನಿರ್ದೇಶಕ ಸೋಮಶೇಖರ್ ನನಗೆ ಬೈದು ಮತ್ತೆ ಮೇಕಪ್ ಮಾಡಿಸೋರು. ಅಪ್ಪು ಜೊತೆ ಇವಳನ್ನು ಕಳಿಸಬೇಡಿ ಅನ್ನೋವ್ರು. ಆದರೆ ನಾನು ಶೂಟಿಂಗ್ ಮುಗಿದ ತಕ್ಷಣ ಅಪ್ಪುನ ಕರೆದುಕೊಂಡು ಐಸ್ಕ್ರೀಂ ತಿನ್ನೋಕೆ ಹೋಗಿಬಿಡುತ್ತಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.