ಬಡವ ರಾಸ್ಕಲ್ ಸೂಪರ್ ಹಿಟ್ ಹಾದಿಯಲ್ಲಿದೆ. ಚಿತ್ರದ ಟೈಟಲ್ ಕಾರ್ಡ್ ಶುರುವಾಗುವುದೇ ಗೀತಾ ಶಿವರಾಜ್‍ಕುಮಾರ್ ಆಶೀರ್ವಾದದೊಂದಿಗೆ ಎನ್ನುವ ಅಡಿಬರಹದೊಂದಿಗೆ. ಅವರ ಆಶೀರ್ವಾದದೊಂದಿಗೆ ಎನ್ನುವುದನ್ನು ನಾವು ಹಾಕುತ್ತೇವೆ ಎನ್ನುವುದರಲ್ಲೇ ಅವರು ನನಗೆ ಎಷ್ಟು ಬೆಂಬಲವಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಎಂದಿದ್ದರು ಧನಂಜಯ್.
ಚಿತ್ರ ಬಿಡುಗಡೆಗೂ ಮುನ್ನ ನಡೆದಿದ್ದ ಈವೆಂಟ್‍ನಲ್ಲಿ ಶಿವರಾಜ್ ಕುಮಾರ್ ಬಡವ ರಾಸ್ಕಲ್ ಬಗ್ಗೆ ಮಾತನಾಡಿದ್ದರು. ರಿಲೀಸ್ ದಿನ ನಾನು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಸಿನಿಮಾ ನೋಡುತ್ತೇನೆ ಎಂದಿದ್ದರು ಶಿವಣ್ಣ. ನುಡಿದಂತೆಯೇ ನಡೆದಿದ್ದಾರೆ.
ಸಿನಿಮಾ ರಿಲೀಸ್ ದಿನವೇ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರೋ ಡಿಆರ್‍ಸಿ ಸಿನಿಮಾಸ್‍ನಲ್ಲಿ ಸಿನಿಮಾ ನೋಡಿದ್ದಾರೆ ಶಿವಣ್ಣ. ನನಗೆ ಧನಂಜಯ್ ಪರ್ಫಾಮೆನ್ಸ್ ಇಷ್ಟವಾಯ್ತು. ಶಂಕರ್ ಗುರು ಒಳ್ಳೆಯ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದ ಒಂದೊಂದು ಪಾತ್ರಗಳೂ ಇಷ್ಟವಾಗುತ್ತವೆ. ಫಸ್ಟ್ ಪ್ರೊಡಕ್ಷನ್‍ನಲ್ಲೇ ಧನಂಜಯ್ ಅದ್ಧೂರಿಯಾಗಿ ಸಿನಿಮಾ ಮಾಡಿದ್ದಾರೆ. ಸಣ್ಣ ಸಣ್ಣ ವಿಷಯಗಳನ್ನ ವಿಭಿನ್ನವಾಗಿ, ಕ್ಯೂರಿಯಾಸಿಟಿ ಹುಟ್ಟಿಸುತ್ತಾ.. ಕಾಮಿಡಿಯಾಗಿ ಹೇಳಿದ್ದಾರೆ. ಹೃದಯಕ್ಕೆ ಹತ್ತಿರವಾಗುವ ಸಿನಿಮಾ ಎಂದಿದ್ದಾರೆ ಶಿವಣ್ಣ.