ಕೋಟಿ ರಾಮು ಎಂದೇ ಹೆಸರಾಗಿದ್ದ ರಾಮು ಅವರು ನಿರ್ಮಿಸಿದ್ದ 39ನೇ ಹಾಗೂ ಕೊನೆಯ ಸಿನಿಮಾ ಅರ್ಜುನ್ ಗೌಡ. ರಾಮು ಅನಿರೀಕ್ಷಿತವಾಗಿ ಕೊರೊನಾಗೆ ಬಲಿಯಾದ ನಂತರ ಅವರ ಕನಸನ್ನು ನನಸು ಮಾಡಲು ಪಣ ತೊಟ್ಟಿರುವುದು ನಟಿ ಮಾಲಾಶ್ರೀ. ಪತಿಯ ಕೊನೆಯ ಚಿತ್ರವನ್ನು ಬಿಡುಗಡೆ ಮಾಡಲು ಹೊರಟಿರುವ ಮಾಲಾಶ್ರೀ, ಅರ್ಜುನ್ ಗೌಡ ಚಿತ್ರವನ್ನು ಡಿಸೆಂಬರ್ 31ಕ್ಕೆ ರಿಲೀಸ್ ಮಾಡುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಅರ್ಜುನ್ ಗೌಡನಾಗಿ ನಟಿಸಿದ್ದಾರೆ, ಅರ್ಜುನ್ ಗೌಡನ ಗೆಳತಿ ಜಾಹ್ನವಿಯಾಗಿ ನಟಿಸಿರುವುದು ಪ್ರಿಯಾಂಕಾ ತಿಮ್ಮೇಶ್. ಆ್ಯಕ್ಷನ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಅರ್ಜುನ್ ಗೌಡನದ್ದು ನೇರಾನೇರ ಮಾತನಾಡುವ ವ್ಯಕ್ತಿಯ ಪಾತ್ರವಂತೆ. ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡದಲ್ಲಿ ಕಡ್ಡಿಪುಡಿ ಚಂದ್ರು, ಸ್ಪರ್ಶ ರೇಖಾ, ರಾಹುಲ್ ದೇವ್, ಸಾಧು ಕೋಕಿಲ ದೊಡ್ಡ ತಾರಾಗಣವೇ ಇದೆ.