ಆಗ ನಾನಿನ್ನೂ ಚಿಕ್ಕ ಹುಡುಗ. ಕಪಿಲ್ ದೇವ್ ಅಂದ್ರೆ ಇಷ್ಟ. ಅವರ ಜೊತೆ ಫೋಟೋ ತೆಗೆಸಿಕೊಳ್ಳೋ ಆಸೆ. 1987 ಇರಬೇಕು. ವೆಸ್ಟ್‍ಇಂಡೀಸ್ ಜೊತೆ ಆಡೋಕೆ ಕಪಿಲ್ ದೇವ್ ಟೀಂ ಬೆಂಗಳೂರಿಗೆ ಬಂದಿತ್ತು. ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಉಳಿದುಕೊಂಡಿತ್ತು. ನಾನು ಅಕ್ಕನ ಜೊತೆ ಹೋಗಿದ್ದೆ.
ಕಪಿಲ್ ಹೋಗುತ್ತಿದ್ದನ್ನು ನೋಡಿ.. ಓಡಿ ಹೊಗಿ ಅವರ ಕೋಟ್ ಹಿಡಿದು ಎಳೆದೆ. ಅವರು ತಿರುಗಿ ನೋಡಿ ಏನು ಬೇಕು ಮಗು ಅಂದ್ರು. ನಾನು ಫೋಟೋ ಬೇಕು ಎಂದು ನನ್ನ ಬಳಿಯಿದ್ದ ಫ್ಯೂಜಿ ಕ್ಯಾಮೆರಾ ತೋರಿಸಿದೆ. ಯಾರು ಫೋಟೋ ತೆಗೀತಾರೆ ಅಂದೆ. ಅಷ್ಟೊತ್ತಿಗೆ ನನ್ನ ಅಕ್ಕ ಕೂಡಾ ಓಡೋಡಿ ಬಂದಿದ್ದರು. ಅಕ್ಕನನ್ನು ತೋರಿಸಿದೆ. ಆದರೆ, ಫೋಟೋ ತೆಗೆಯೋಕೆ ಅದೇ ಟೈಮಿಗೆ ಹೋದರೆ ಕ್ಯಾಮೆರಾ ಕೆಲಸ ಮಾಡ್ತಿಲ್ಲ. ನಾನು ಅಳೋಕೆ ಶುರು ಮಾಡಿದೆ. ಆಗ ಕಪಿಲ್ ಅವರೇ ಸಮಾಧಾನ ಮಾಡಿದ್ರು. ನಂತರ ನಾನು ವೆಂಗ್ ಸರ್ಕಾರ್ ಅವರನ್ನ ನೋಡ್ಬೇಕು ಅಂದೆ. ಅಳುತ್ತಿದ್ದ ನನ್ನನ್ನು ಕರೆದುಕೊಂಡು ಹೋಗಿ ಅವರನ್ನೂ ಭೇಟಿ ಮಾಡಿಸಿದರು.
ಸುದೀಪ್ ಇದಿಷ್ಟೂ ಕಥೆಯನ್ನು 83 ಚಿತ್ರದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಳ್ತಿರೋವಾಗ ಅಲ್ಲಿಯೇ ವೇದಿಕೆ ಮೇಲಿದ್ದ ಕಪಿಲ್ ಎದ್ದು ಬಂದು ಈಗ ಸುದೀಪ್‍ಗೆ ನನ್ನ ಜೊತೆ ಫೋಟೋ ಬೇಕೋ ಬೇಡವೋ.. ನನಗೀಗ ಸುದೀಪ್ ಜೊತೆ ಪಿಕ್ಚರ್ ಬೇಕು ಎಂದು ಫೋಟೋ ತೆಗೆಸಿಕೊಂಡರು.
ಇದೆಲ್ಲ ನಡೆದದ್ದು 83 ಈವೆಂಟ್‍ನಲ್ಲಿ. ಅಂದು ಕಪಿಲ್ ಜೊತೆಗೆ ಒಂದು ಫೋಟೋಗಾಗಿ ಕಣ್ಣೀರಿಟ್ಟಿದ್ದ ಸುದೀಪ್, ಈಗ ಅವರ ಬಯೋಪಿಕ್ 83ಯನ್ನು ಕನ್ನಡದಲ್ಲಿ ಅರ್ಪಣೆ ಮಾಡುತ್ತಿದ್ದಾರೆ.