ಎಂಇಎಸ್ ಮತ್ತು ಶಿವಸೇನೆಯವರ ಪುಂಡಾಟಿಕೆ ಮಿತಿಮೀರುತ್ತಿದೆ. ಅನಗತ್ಯವಾಗಿ ಭಾಷೆ ವಿಷಯವನ್ನೆತ್ತಿಕೊಂಡು ಆಗಾಗ್ಗೆ ಗಲಾಟೆ ಸೃಷ್ಟಿಸಿ, ಬೆಂಕಿ ಹಚ್ಚುವ ಎರಡೂ ಸಂಘಟನೆಗಳ ಗೂಂಡಾಗಳು ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವುದಷ್ಟೇ ಅಲ್ಲ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನೂ ಭಗ್ನ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್, ವಾಹನಗಳನ್ನು ಪುಡಿ ಪುಡಿ ಮಾಡುತ್ತಾ ಗೂಂಡಾಗಿರಿ ಮಾಡುತ್ತಿದ್ದರೆ, ಅದನ್ನು ಕಾನೂನು ಪ್ರಕಾರ ಕಂಟ್ರೋಲ್ ಮಾಡಬೇಕಾದ ಹುದ್ದೆಯಲ್ಲಿರೋ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೀದಿಯಲ್ಲಿ ಬೆಂಕಿ ಹಚ್ಚುತ್ತಿರೋ ಗೂಂಡಾಗಳನ್ನೂ ಮೀರಿಸುವಂತೆ ಮಾತನಾಡಿದ್ದಾರೆ. ಪ್ರತಿಭಟನೆ ಜೋರಾಗುತ್ತಿದೆ. ಕನ್ನಡ ಚಿತ್ರರಂಗವೂ ಹೋರಾಟಕ್ಕೆ ಕೈ ಜೋಡಿಸಿದೆ.
ಶಿವ ರಾಜ್‍ಕುಮಾರ್ : ಭಾಷೆಗಾಗಿ ಪ್ರಾಣ ಕೊಡೋಕೂ ಸಿದ್ಧ. ಬಾವುಟ ಸುಡುವುದು ತಾಯಿಯನ್ನು ಸುಟ್ಟಂತೆ. ಕನ್ನಡಿಗರಿಗೆ ಪವರ್ ಇಲ್ಲ ಎಂದುಕೊಳ್ಳಬೇಡಿ. ಯಾವ ರಾಜ್ಯದಲ್ಲಿ ಯಾವ ಬಾಷೆ ಇದೆಯೋ, ಅದಕ್ಕೆ ಗೌರವ ಕೊಡೋದು ಧರ್ಮ. ಸರ್ಕಾರಗಳೂ ರಾಜಕೀಯ ಬದಿಗಿಟ್ಟು ಗಮನ ಕೊಡಬೇಕು. ಬರೀ ವೋಟಿಗಾಗಿ ಕಾಯೋದ್ರಲ್ಲಿ ಅರ್ಥ ಇಲ್ಲ
ದುನಿಯಾ ವಿಜಯ್ : ಕನ್ನಡ ಬಾವುಟ ಸುಟ್ಟಿರೋದು ನೋಡ್ಕೊಂಡು ಸುಮ್ಮನೆ ಇರೋಕೆ ಆಗ್ತಾ ಇಲ್ಲ. ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಲೇಬೇಕು.
ಡಾಲಿ ಧನಂಜಯ್ : ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರೋ ದಬ್ಬಾಳಿಕೆಗಳು ನಿಲ್ಲಬೇಕು. ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ಮರಾಠಿಗರೂ ಇದ್ದಾರೆ ಎನ್ನುವುದನ್ನು ಮರೆಯಬಾರದು.
ಪ್ರಜ್ವಲ್ ದೇವರಾಜ್ : ಬಾವುಟ ಸುಡುವಂತಹಾ ಘಟನೆಗಳು ನಡೆದಾಗ ನಾವೆಲ್ಲ ಒಗ್ಗಟ್ಟಾಗಿ ಧ್ವನಿಯೆತ್ತಬೇಕು
ನೆನಪಿರಲಿ ಪ್ರೇಮ್ : ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು. ಚಿತ್ರರಂಗ ಹೋರಾಟಕ್ಕೆ ಧುಮುಕಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಹೋರಾಟ ಉಗ್ರರೂಪ ಪಡೆಯಲಿದೆ. ಹೀಗಾಗಿ ಚಿತ್ರರಂಗ ಶಾಂತಿ ಮಂತ್ರ ಪಠಿಸುತ್ತಿದೆ. ಕನ್ನಡಿಗರು ಮತ್ತು ಮರಾಠಿಗರ ಬಾಂಧವ್ಯ ಹಾಳು ಮಾಡಬೇಡಿ.
ಇಂದ್ರಜಿತ್ ಲಂಕೇಶ್ : ನಾನು ಟ್ವಿಟರ್ ಹೋರಾಟದ ವಿರೋಧಿ. ಹೀಗಾಗಿ ಬೆಳಗಾವಿಗೆ ಹೋಗಿ ಹೋರಾಟದಲ್ಲಿ ಭಾಗವಹಿಸುತ್ತೇನೆ. ಶಿವಣ್ಣ ನೇತೃತ್ವದಲ್ಲಿ ಚಿತ್ರರಂಗ ಹೋರಾಟಕ್ಕಿಳಿಯಬೇಕು.
ತಾರಾ : ನಮ್ಮ ಮಧ್ಯೆ ಬಾವುಟ ಸುಡುವ ಮನಸ್ಸುಗಳಿವೆ ಅಂದ್ರೆ ಆಶ್ಚರ್ಯವಾಗುತ್ತೆ. ಅಂತಹ ಕೆಟ್ಟ ಮನಸ್ಸುಗಳಿಗೆ ನನ್ನ ಧಿಕ್ಕಾರ.
ರಂಗಾಯಣ ರಘು : ಮರಾಠಿಗರಿಗಾಗಿ ನಾವು ಏನೆಲ್ಲ ಮಾಡಿದ್ದೇವೆ. ಏರಿಯಾಗಳನ್ನೇ ಬಿಟ್ಟುಕೊಟ್ಟಿದ್ದೇವೆ. ಮರಾಠಿಗರ ಪ್ರತಿಮೆಗಳು ಕರ್ನಾಟಕದಲ್ಲಿವೆ. ಆದರೆ, ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಯಾವ ಸ್ಥಾನವಿದೆ? ನಾವು ಸುಮ್ಮನಿದ್ದರೆ ಸುಮ್ಮನಿರುತ್ತೇವೆ. ಎದ್ದು ನಿಂತರೆ ನಾವು ಏನು ಅನ್ನೋದನ್ನ ತೋರಿಸಿಯೇ ತೋರಿಸುತ್ತೇವೆ.