ಮಾರ್ಟಿನ್. ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಕಾಂಬಿನೇಷನ್ನಲ್ಲಿ ಬರುತ್ತಿರೋ 2ನೇ ಸಿನಿಮಾ. ಮೊದಲ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅದ್ಧೂರಿಯಾಗಿ ಲಾಂಚ್ ಮಾಡಿದ್ದ ಅರ್ಜುನ್, ಈ ಬಾರಿಯೂ ಹೊಸ ಕಥೆಯೊಂದಿಗೆ ಬರುತ್ತಿದ್ದಾರೆ. ಅರ್ಜುನ್ ಜೊತೆಗೆ ಕಥೆಗೆ ಕುಳಿತಿರೋದು ಅರುಣ್ ಬಾಲಾಜಿ ಮತ್ತು ಸ್ವಾಮೀಜಿ. ಈಗ ಚಿತ್ರಕ್ಕೆ ಹೀರೋಯಿನ್ ಫೈನಲ್ ಆಗಿದ್ದು, ವೈಭವಿ ಶಾಂಡಿಲ್ಯ ಧ್ರುವ ಜೊತೆ ನಟಿಸಲಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ವೈಭವಿ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ. ವೈಭವಿಗೆ ಇದು ಮೊದಲ ಕನ್ನಡ ಚಿತ್ರವೇನಲ್ಲ. ಈಗಾಗಲೇ ರಾಜ್ ವಿಷ್ಣು ಚಿತ್ರದಲ್ಲಿ ನಟಿಸಿದ್ದ ವೈಭವಿ, ಭಟ್ಟರ ಗಾಳಿಪಟ 2 ಚಿತ್ರದಲ್ಲೂ ನಟಿಸಿದ್ದಾರೆ. ಚಿತ್ರತಂಡ ಸದ್ಯಕ್ಕೆ ಸೈಲೆಂಟ್ ಆಗಿದೆ. ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಪೊಗರು ನಂತರ ಮತ್ತೊಮ್ಮೆ ಧ್ರುವ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಗೆ ಹೋಗುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಪಕರಾಗಿದ್ದು, ಅದ್ಧೂರಿತನಕ್ಕೆ ಕೊರತೆಯಿಲ್ಲ. ಅಂದಹಾಗೆ ಚಿತ್ರದ ಟೈಟಲ್ ಮಾರ್ಟಿನ್ ಆದರೂ, ಟೈಟಲ್ ರೋಲ್ ಅರ್ಥಾತ್ ಮಾರ್ಟಿನ್, ಧ್ರುವ ಸರ್ಜಾ ಅವರಲ್ಲವಂತೆ. ಚಿತ್ರೀಕರಣದ ವೇಳೆಯಲ್ಲೇ ಕುತೂಹಲ ಕೆರಳಿಸುತ್ತಿದೆ ಮಾರ್ಟಿನ್.