ಅಯೋಗ್ಯ ಚಿತ್ರದ ಮೂಲಕ ಅಯೋಗ್ಯ ಮಹೇಶ್ ಎಂದೇ ಖ್ಯಾತರಾದವರು ನಿರ್ದೇಶಕ ಮಹೇಶ್ ಕುಮಾರ್. ಮಹೇಶ್ ನಿರ್ದೇಶನದ 2ನೇ ಸಿನಿಮಾ ಮದಗಜ. ಆದರೆ ಮಹೇಶ್ ಅವರಿಗೆ ಅಯೋಗ್ಯ ಚಿತ್ರಕ್ಕಿಂತ ಹೆಚ್ಚಿನ ಟೆನ್ಷನ್ ಮತ್ತು ಆತಂಕ ಇರೋದು ಮದಗಜ ಚಿತ್ರದ ಮೇಲಂತೆ.
ಅಯೋಗ್ಯ ಚಿತ್ರ ಮಾಡಿದಾಗ ನನ್ನ ಮೇಲೆ ನಿರೀಕ್ಷೆಗಳಿರಲಿಲ್ಲ. ಎಲ್ಲ ಹೊಸಬರಂತೆ ನಾನೂ ಒಬ್ಬ ಹೊಸ ನಿರ್ದೇಶಕ. ಅಷ್ಟೆ. ಆದರೆ, ಆ ಚಿತ್ರ ಹಿಟ್ ಆಯ್ತು. ಹಾಗಾಗಿಯೇ ಈ ಚಿತ್ರದ ಮೇಲೆ ಸಹಜವಾಗಿಯೇ ಪ್ರೇಕ್ಷಕರಿಗೆ ನಿರೀಕ್ಷೆ ಮತ್ತು ಕುತೂಹಲಗಳಿರುತ್ತವೆ. ನನಗೂ ಆ ಟೆನ್ಷನ್ ಇದೆ ಎನ್ನುತ್ತಾರೆ ಮಹೇಶ್.
ಅವರ ನಿರೀಕ್ಷೆ, ಆತಂಕಕ್ಕೆ ಇನ್ನೂ ಹಲವು ಕಾರಣಗಳಿವೆ. ಶ್ರೀಮುರಳಿಯವರಿಗೆ ಕಥೆ ಹೇಳಿದಾಗ ಅವರು ಅಯೋಗ್ಯ ಚಿತ್ರವನ್ನು ನೋಡಿರಲಿಲ್ಲ. ಆದರೆ ಚಿತ್ರದ ಬಗ್ಗೆ ಕೇಳಿದ್ದರು. ನನ್ನ ಕಥೆ ಹೇಳೋ ಶೈಲಿ ಮುತ್ತು ಉತ್ಸಾಹ ಇಷ್ಟವಾಗಿತ್ತು. ಓಕೆ ಎಂದರು. ವಾರಾಣಸಿಯಲ್ಲಿ ನಡೆದ ಸತ್ಯ ಘಟನೆಯೊಂದರ ಬೆನ್ನು ಹತ್ತಿ ಹೋದಾಗ ಬೆಳೆದ ಕಥೆ ಇದು. ಮದರ್ ಸೆಂಟಿಮೆಂಟ್ ಜೊತೆಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಇಟ್ಟುಕೊಂಡು ಬೆಳೆಸಿರುವ ಕಥೆ ಮದಗಜ ಎನ್ನುತ್ತಾರೆ ಮಹೇಶ್.
ಈ ಚಿತ್ರದಲ್ಲಿ ಜಗಪತಿ ಬಾಬು, ದೇವಯಾನಿಯಂತಹವರ ಜೊತೆ ಕೆಲಸ ಮಾಡಿದ ಖುಷಿ ಇದೆ. ನಿರ್ಮಾಪಕ ಉಮಾಪತಿ ಅವರಿಗೆ ಮೊದಲು ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಯೋಚನೆ ಇರಲಿಲ್ಲ. ಆದರೆ ವಾರಾಣಸಿ ಶೂಟಿಂಗ್ ನಂತರ ಉಮಾಪತಿ ಶ್ರೀನಿವಾಸ್ ಗೌಡ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದರು. ಹಾಗೆ ನೋಡಿದರೆ, ತೆರೆಯ ಮೇಲಿನ ಮದಗಜ ಶ್ರೀಮುರಳಿ. ತೆರೆಯ ಹಿಂದಿನ ಮದಗಜ ನಮ್ಮ ಪ್ರೊಡ್ಯೂಸರ್ ಎಂದು ಎಲ್ಲ ಕ್ರೆಡಿಟ್‍ನ್ನೂ ನಿರ್ಮಾಪಕರಿಗೇ ಕೊಡುತ್ತಾರೆ ಡೈರೆಕ್ಟರ್.