ಸುಮಾರು 3 ವರ್ಷಗಳ ಹಿಂದೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣ ಮೀಟೂ ಕೇಸ್. ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ನಟಿ ಶೃತಿ ಹರಿಹರನ್ ತಾವು ಮಾಡಿದ್ದ ಆರೋಪಕ್ಕೆ ಯಾವುದೇ ಸಾಕ್ಷ್ಯ ನೀಡುವಲ್ಲಿ ವಿಫಲರಾಗಿರುವ ಕಾರಣ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿರುವ ನ್ಯಾಯಾಲಯ, ಬಿ ರಿಪೋರ್ಟ್ ಬಗ್ಗೆ ಯಾವುದೇ ಆಕ್ಷೇಪವಿದ್ದಲ್ಲಿ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಿದೆ. ಬಿ ರಿಪೋರ್ಟ್ ಸಲ್ಲಿಸುವುದಕ್ಕೂ ಮುನ್ನ ಪೊಲೀಸರು ಶೃತಿ ಹರಿಹರನ್ ಅವರಿಗೆ ಮಾಹಿತಿ ನೀಡಿದ್ದರಾದರೂ, ಶೃತಿ ಹರಿಹರನ್ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ.