ದೃಶ್ಯ. ಕುಟುಂಬವನ್ನು ಉಳಿಸಿಕೊಳ್ಳೋಕೆ ಪತ್ನಿ ಮತ್ತು ಮಗಳು ಮಾಡಿದ್ದ ಕೊಲೆಯನ್ನು ಮುಚ್ಚಿ ಹಾಕುವ ರಾಜೇಂದ್ರ ಪೊನ್ನಪ್ಪ, ನ್ಯಾಯಲಾಯದ ಕಣ್ಣಿನಲ್ಲಿ ನಿರಪರಾಧಿ. ಆದರೆ, ಆತನನ್ನು ಅಷ್ಟಕ್ಕೇ ಬಿಡಲು ಮಗನನ್ನು ಕಳೆದುಕೊಂಡ ತಾಯಿ ಸುಮ್ಮನಿಲ್ಲ. ಆದ ಅವಮಾನವನ್ನು ಮರೆಯಲು ಪೊಲೀಸರೂ ಸುಮ್ಮನಿಲ್ಲ. ಅವರು ರಾಜೇಂದ್ರ ಪೊನ್ನಪ್ಪನ ಬೇಟೆಗೆ ಹೊಂಚು ಹಾಕುತ್ತಲೇ ಇದ್ದಾರೆ. ಹಾಗೆ ಹೊಂಚು ಹಾಕಿದವರು ರಾಜೇಂದ್ರ ಪೊನ್ನಪ್ಪನನ್ನು ಸುಮ್ಮನೆ ಬಿಡುತ್ತಾರಾ? ಪೊಲೀಸ್ ಠಾಣೆಯ ಕೆಳಗೆ ಹೂತಿದ್ದ ಆ ಶವ ಪೊಲೀಸರಿಗೆ ಸಿಕ್ಕುತ್ತಾ? ಹೇಗೆ? ಅದಾದ ನಂತರ ಏನಾಗುತ್ತೆ?
ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಬರುತ್ತಿದೆ ದೃಶ್ಯ 2. ಚಿತ್ರದ ಟ್ರೇಲರ್ ಹೊರಬಿದ್ದಿದೆ. ಮಲಯಾಳಂ ಹಾಗೂ ತೆಲುಗು ದೃಶ್ಯ 2ಗಿಂತ ಭಿನ್ನ ಎನಿಸುತ್ತಿದೆ. ಚಿತ್ರಕಥೆಯನ್ನೂ ಯಥಾವತ್ ಇಟ್ಟಿದ್ದಾರಾ? ಸ್ವಲ್ಪ ವಿಶೇಷತೆಯಂತೂ ಇದೆ ಎನ್ನಿಸುವ ಸುಳಿವು ಟ್ರೇಲರ್ನಲ್ಲಿ ಕೊಟ್ಟಿದ್ದಾರೆ ವಾಸು.
ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸುದೀಪ್, ಈ ಚಿತ್ರವನ್ನು ರವಿಚಂದ್ರನ್ ಅವರ ಹೆಗಲೇರಿಸಿದ್ದು ತಾವೇ ಎಂಬ ಸತ್ಯವನ್ನೂ ಬಿಚ್ಚಿಟ್ಟರು. ತಾವು ದೃಶ್ಯಂನ್ನು ನೋಡಿದ್ದು ಕನ್ನಡದಲ್ಲಿ ಮಾತ್ರ. ದೃಶ್ಯ 2 ಚಿತ್ರವನ್ನೂ ನಾನೂ ಕನ್ನಡದಲ್ಲಿ ಮಾತ್ರ ನೋಡುತ್ತೇನೆ ಎಂದರು. ರವಿಚಂದ್ರನ್, ನವ್ಯಾ ನಾಯರ್, ಅನಂತ್ ನಾಗ್, ಪ್ರಮೋದ್ ಶೆಟ್ಟಿ ನಟಿಸಿರೋ ಚಿತ್ರ ಡಿಸೆಂಬರ್ನಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.