ಶಿವ ರಾಜ್ ಕುಮಾರ್ ಪುನೀತ್ ಅಗಲಿಕೆ ನೋವಿನಿಂದ ಇನ್ನೂ ಹೊರಬಂದಂತಿಲ್ಲ. ಪತ್ನಿ ಗೀತಾ ಜೊತೆ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ದ ಶಿವಣ್ಣ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಶಕ್ತಿಧಾಮದಲ್ಲಿ 800ಕ್ಕೂ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, 250ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆ ಟ್ರಸ್ಟ್ನ ಅಧ್ಯಕ್ಷೆ ಗೀತಾ ಶಿವ ರಾಜ್ ಕುಮಾರ್. ತಾಯಿಯ ನಂತರ ಅತ್ತಿಗೆಯ ಉಸ್ತುವಾರಿಯಲ್ಲಿ ನಡೆಯುತ್ತಿದ್ದ ಸೇವೆಗೆ ಆಧಾರಸ್ತಂಭವಾಗಿದ್ದವರು ಪುನೀತ್.
ಶಕ್ತಿಧಾಮದ ಆಗುಹೋಗುಗಳ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಎಲ್ಲವನ್ನೂ ಗೀತಾ ನೋಡಿಕೊಳ್ಳುತ್ತಾರೆ. ಅವರೇ ಈ ಸಂಸ್ಥೆಯ ಮುಖ್ಯಸ್ಥರು ಎಂದ ಶಿವಣ್ಣಗೆ ಸಹಜವಾಗಿಯೇ ಶಿವಣ್ಣಗೆ ಪುನೀತ್ ಪ್ರಶ್ನೆ ಎದುರಾಯ್ತು.
ಈಗಲೂ ಅಪ್ಪು ಇಲ್ಲ ಅನ್ನೋದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ನಂಬೋಕೆ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ದಿಢೀರನೆ ಬಂದು ಶಿವಣ್ಣ ಎನ್ನುತ್ತಾನೆ ಎಂಬ ನಂಬಿಕೆ, ನಿರೀಕ್ಷೆಯಲ್ಲೇ ಇದ್ದೇನೆ. ಆದರೆ.. ಅದು ಸತ್ಯವಲ್ಲ ಅನ್ನೋದು ಮನಸ್ಸಿಗೆ ಗೊತ್ತು. ಹೃದಯಕ್ಕೆ ಗೊತ್ತಿಲ್ಲ. ಹೊರಗೆ ಹೋಗುವಾಗ ಎಲ್ಲಿ ನೋಡಿದರೂ ಅಪ್ಪು ಫೋಟೋಗೆ ಹಾರ ಹಾಕಿರುವ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ನಾವೂ ಒಂದು ದಿನ ಹೋಗುವವರೇ. ಆದರೆ.. ನನಗೆ ಅಪ್ಪುವನ್ನು ಈಗಲೂ ಆ ರೀ ತಿ ನೋಡೋಕೆ ಆಗುತ್ತಿಲ್ಲ. ಮರೆತು ಬದುಕೋಕೆ ಸಾಧ್ಯವಿಲ್ಲ. ನೋವನ್ನು ನುಂಗಿಕೊಂಡೇ ಬದುಕಬೇಕು. ವಾಸ್ತವವನ್ನು ಎದುರಿಸಲೇಬೇಕು ಎಂದಿದ್ದಾರೆ ಶಿವಣ್ಣ.
ಯಾರೋ ಒಬ್ಬರು ಕೇಳಿದರು. ನೀವು ಜಗಳವಾಡಿದ್ದಿರಾ ಅಂತಾ. ದೇವರಾಣೆ.. ನಾನು ಮತ್ತು ಅಪ್ಪು ಜಗಳವಾಡಿಲ್ಲ. ಅವನಿಗೂ ನನಗೂ 13 ವರ್ಷಗಳ ಅಂತರ. ಚಿಕ್ಕಂದಿನಲ್ಲೇ ದೊಡ್ಡ ಸಾಧನೆ ಮಾಡಿದವನು ಅಪ್ಪು. ಅವನ ಒಂದೊಂದು ಹೆಜ್ಜೆ, ಸಾಧನೆಯನ್ನೂ ಸಂಭ್ರಮಿಸಿದ್ದೇನೆ. ನನಗೆ ಅವನು
ಮಗನಂತೆಯೇ ಇದ್ದ. ಜಗಳವಾಡೋ ಕಲ್ಪನೆಯಾದರೂ ಸಾಧ್ಯವೇ. ಸದಾ ಭಜರಂಗಿ 2 ರಿಲೀಸ್ ದಿನ ಕೂಡಾ ನನ್ನ ಗೆಳೆಯರಿಗೆ, ಸಿನಿಮಾ ನೋಡಿದವರಿಗೆ ಫೋನ್ ಮಾಡಿ ಸಿನಿಮಾ ಹೇಗಿದೆ, ನಾನು ಹೇಗೆ ಮಾಡಿದ್ದೇನೆ ಎಂಬೆಲ್ಲ ಮಾಹಿತಿ ಪಡೆದಿದ್ದ. ಸಿನಿಮಾವನ್ನು ನೋಡೋಕೆ ನನಗೇ ಗೊತ್ತಿಲ್ಲದಂತೆ ಮನೆಯಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ. ಅಪ್ಪು ನನಗೆ ಒಳ್ಳೆಯದನ್ನು ಬಯಸುತ್ತಿದ್ದ. ಅಶ್ವಿನಿ ಮತ್ತು ಮಕ್ಕಳಿಗೆ ಜೊತೆಯಾಗಿ ನಾವು ಸದಾ ಜೊತೆಯಲ್ಲಿರುತ್ತೇವೆ ಎಂದಿದ್ದಾರೆ ಶಿವಣ್ಣ.