ಪುನೀತ್ ರಾಜ್ಕುಮಾರ್ ಕನಸುಗಾರ. ಚಿತ್ರರಂಗದ ಬಗ್ಗೆ, ಸಿನಿಮಾಗಳ ಬಗ್ಗೆ, ಹೊಸ ಹೊಸ ಪ್ರಾಜೆಕ್ಟ್ಗಳ ಬಗ್ಗೆ.. ಹೊಸ ಹೊಸ ಕನಸು ಕಂಡಿದ್ದವರು. ಆ ಕನಸಿನ ಹಾದಿಯಲ್ಲಿ ಯಶಸ್ಸನ್ನೂ ಕಂಡಿದ್ದವರು. ಅಂತಹ ಇನ್ನೂ ಹತ್ತಾರು ಕನಸುಗಳು ಹಾಗೆಯೇ ಉಳಿದುಬಿಡುತ್ತವಾ..? ಅದಕ್ಕೆ ಅವಕಾಶ ನೀಡುವುದಿಲ್ಲ. ಪುನೀತ್ ಅವರ ಕನಸುಗಳು ಮುಂದುವರೆಯುತ್ತವೆ. ನನಸಾಗುತ್ತವೆ.. ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಘೋಷಿಸಿದ್ದಾರೆ.
ನವೆಂಬರ್ 1ರಂದು ಪುನೀತ್ ಅವರು ಕನ್ನಡದ ಮೊದಲ ವೈಲ್ಡ್ ಲೈಫ್ ಡಾಕ್ಯುಮೆಂಟರಿ ಟ್ರೇಲರ್ ರಿಲೀಸ್ ಮಾಡುವ ಪ್ಲಾನ್ನಲ್ಲಿದ್ದರು. ಅಮೋಘವರ್ಷ ಅವರೊಂದಿಗೆ ರಾಜ್ಯದ ಕಾಡುಗಳನ್ನೆಲ್ಲ ಸುತ್ತಿದ್ದರು. ಡಾಕ್ಯುಮೆಂಟರಿಗಾಗಿ ಸಮುದ್ರ, ಕಾಡು ಎಲ್ಲವನ್ನು ಸುತ್ತಿದ್ದ ಅಪ್ಪು, ನವೆಂಬರ್ 1ರಂದ ಆ ಡಾಕ್ಯುಮೆಂಟರಿಯ ಟ್ರೇಲರ್ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದರು.
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯ ಈಗ ಬಂದಿದೆ.. ಎಂದು ಪುನೀತ್ ಟ್ವೀಟ್ ಮಾಡಿದ್ದು ನೆನಪಿದೆಯಾ..? ಅದು ಇದೇ ಡಾಕ್ಯುಮೆಂಟರಿ ಕುರಿತಾಗಿತ್ತು.
ಆ ಪ್ರಾಜೆಕ್ಟ್ ನಿಂತಿಲ್ಲ. ಅವರ ಕನಸುಗಳನ್ನು ನನಸಾಗಿಸುತ್ತೇವೆ. ಸದ್ಯಕ್ಕೆ ಬಿದ್ದಿರುವುದು ಅಲ್ಪವಿರಾಮವಷ್ಟೇ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಘೋಷಿಸಿದ್ದಾರೆ. ಪುನೀತ್ ನಿಧನದ ನಂತರ ಸೋಷಿಯಲ್ ಮೀಡಿಯಾಗೆ ಬಂದ ಅಶ್ವಿನಿ, ಅಪ್ಪು ಕನಸುಗಳನ್ನು ನನನಸು ಮಾಡುವ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ.