ಇದು ಅಚ್ಚರಿಯಾದರೂ ಸತ್ಯ. ಬಾಲಿವುಡ್ನಲ್ಲಿ ಅಮೀರ್ ಖಾನ್ ರೇಂಜ್ ಬೇರೆಯೇ ಇದೆ. ಅಂತಾದ್ದರಲ್ಲಿ ಅಮೀರ್ ಖಾನ್ರಂತಾ ಸೂಪರ್ ಸ್ಟಾರ್ ಕೆಜಿಎಫ್ ಟೀಂನ ಕ್ಷಮೆ ಕೇಳುವುದು ಎಂದರೆ ಸುಮ್ಮನೆ ಮಾತಾ..? ಆದರೆ ಇದು ಸತ್ಯ. ಏಕೆಂದರೆ ಇದನ್ನು ಸ್ವತಃ ಅಮೀರ್ ಅವರೇ ಹೇಳಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಏಪ್ರಿಲ್ 14ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿಯಾಗಿದೆ. ಅದೇ ದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡಾ ರಿಲೀಸ್ ಆಗುತ್ತಿದೆ. ದೊಡ್ಡ ಚಿತ್ರವೊಂದು ರಿಲೀಸ್ ಆಗುವಾಗ ಈ ರೀತಿ ಮಾಡುವುದು ಸರಿಯಲ್ಲ ಎಂದು ಹಲವರು ಅಮೀರ್ ನಿರ್ಧಾರದ ಬಗ್ಗೆ ಆಕ್ಷೇಪವೆತ್ತಿದ್ದರು. ಆದರೆ, ಇದೇ ವಿಷಯಕ್ಕೆ ಅಮೀರ್ ಕೆಜಿಎಫ್ ತಂಡದ ಕ್ಷಮೆ ಕೇಳಿದ್ದಾರೆ.
ಲಾಲ್ ಸಿಂಗ್ ಚಡ್ಡಾದಲ್ಲಿ ನಾನು ಮೊದಲ ಬಾರಿಗೆ ಸಿಖ್ ಪಾತ್ರ ಮಾಡಿದ್ದೇನೆ. ಸಿಖ್ಖರಿಗೆ ಏಪ್ರಿಲ್ 14 ಪವಿತ್ರ ದಿನ. ಆ ದಿನ ಸಿಖ್ಖರು ಬೈಸಾಖಿ ಹಬ್ಬ ಆಚರಿಸುತ್ತಾರೆ. ಹೀಗಾಗಿ ಆ ಸೆಂಟಿಮೆಂಟ್ ಕಾರಣಕ್ಕೆ ಏಪ್ರಿಲ್ 14ರಂದು ರಿಲೀಸ್ ಮಾಡುತ್ತಿದ್ದೇವೆ. ಇದನ್ನು ನಾನು ಕೆಜಿಎಫ್ ತಂಡದ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಹಾಗೂ ಯಶ್ ಅವರೊಂದಿಗೆ ಮಾತನಾಡಿದೆ. ನನ್ನ ಭಾವನೆಯನ್ನು ಅವರು ಗೌರವಿಸಿದರು. ಏಪ್ರಿಲ್ 14ರಂದು ರಿಲೀಸ್ ಮಾಡೋಕೆ ಸಮಸ್ಯೆ ಇಲ್ಲ ಎಂದರು. ಯಶ್ ಅವರ ಜೊತೆಯಲ್ಲೂ ಮಾತನಾಡಿದೆ. ನಾನು ಕೆಜಿಎಫ್ ತಂಡಕ್ಕೆ ಮನಸಾರೆ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ ಅಮೀರ್ ಖಾನ್.
ಕೆಜಿಎಫ್ ಌಕ್ಷನ್ ಸಿನಿಮಾ. ನನ್ನದು ಫ್ಯಾಮಿಲಿ ಲವ್ ಸ್ಟೋರಿ. ಎರಡೂ ಬೇರೆ ಬೇರೆ ಜಾನರ್ ಚಿತ್ರಗಳು. ಹೀಗಾಗಿ ಕಲೆಕ್ಷನ್ ವಿಚಾರದಲ್ಲೂ ಸಮಸ್ಯೆಯಾಗುವುದಿಲ್ಲ ಎನ್ನುವುದು ಅಮೀರ್ ಖಾನ್ ಸಮರ್ಥನೆ. ಇನ್ನೊಂದು ಚಿತ್ರದ ಕಲೆಕ್ಷನ್ಗೆ ಅಡ್ಡಿ ಮಾಡುವ ಉದ್ದೇಶ ನಮಗಿಲ್ಲ ಎನ್ನುವುದು ಅಮೀರ್ ಖಾನ್ ವಾದ.