100. ಸಂಖ್ಯೆಗಳನ್ನೇ ಸಿನಿಮಾ ಟೈಟಲ್ ಆಗಿಟ್ಟುಕೊಂಡು ಬಂದ ಸಿನಿಮಾಗಳು ಅಪರೂಪದಲ್ಲಿ ಅಪರೂಪ. ಅಂತಾದ್ದೊಂದು ಪ್ರಯೋಗ ಮಾಡಿದ್ದಾರೆ ರಮೇಶ್ ಅರವಿಂದ್. 100 ಅನ್ನೋ ಟೈಟಲ್ಲೇ ಏಕೆ..? ಈ ಪ್ರಶ್ನೆಗೆ ರಮೇಶ್ ಉತ್ತರಿಸೋದು ಹೀಗೆ.
100 ಅನ್ನೋದು ಯುನಿವರ್ಸಲ್ ನಂಬರ್. ಏನಾದರೂ ಅಪರಾಧವಾದರೆ, ಅದನ್ನು ಕಂಡ ಜನ ಮೊದಲು ಕಾಲ್ ಮಾಡೋ ನಂಬರ್ 100. ಒಬ್ಬ ಕ್ರಿಕೆಟ್ ಆಟಗಾರ ಸೆಂಚುರಿ ಹೊಡೆದಾಗ ಅಥವಾ ಹೊಡೆಯುವಾಗ ಮೈಲ್ ಸ್ಟೋನ್ 100. ಒಬ್ಬ ವಿದ್ಯಾರ್ಥಿಯ ಗುರಿ 100. ಅದನ್ನು ಟೀಚರ್ ಒಬ್ಬರು ವಿದ್ಯಾರ್ಥಿಗೆ ಹೇಳುವಾಗ 100ಕ್ಕೆ 100 ತೆಗೀಬೇಕು. ಅಲ್ಲಿಯೂ 100. ಅಷ್ಟೇ ಅಲ್ಲ, ಮುಂದೊಂದು ದಿನ ಈ ಚಿತ್ರವನ್ನು ನಮಗೆ ಗೊತ್ತೇ ಇಲ್ಲದ ಸ್ಪಾನಿಷ್ ಭಾಷೆಗೆ ಡಬ್ ಮಾಡಿದರೂ ಚಿತ್ರದ ಟೈಟಲ್ ಅಲ್ಲಿಯೂ ರೀಚ್ ಆಗುತ್ತೆ. ಇಷ್ಟೆಲ್ಲಕ್ಕೂ ಮಿಗಿಲಾಗಿ ಆ ಟೈಟಲ್ನ ಹಿಂದೆ ಒಂದು ಸಸ್ಪೆನ್ಸ್ ಇದೆ. ಅದನ್ನು ನೀವು ಚಿತ್ರದಲ್ಲಿಯೇ ನೋಡಬೇಕು ಎನ್ನುತ್ತಾರೆ ರಮೇಶ್.
ಎಲ್ಲವೂ ಪಕ್ಕಾ ಆಗಿದ್ದರೆ ಶಿವಾಜಿ ಸುರತ್ಕಲ್ ಚಿತ್ರದ 50ನೇ ದಿನದಂದು 100 ರಿಲೀಸ್ ಆಗಬೇಕಿತ್ತು. ಎಲ್ಲಕ್ಕೂ ಬ್ರೇಕ್ ಹಾಕಿದ್ದು ಕೊರೊನಾ ಮತ್ತು ಲಾಕ್ಡೌನ್. ಜೊತೆಗೆ ಕೊರೊನಾ ನಮಗೆ ಒಂದಿಷ್ಟು ಸಂಕಷ್ಟಗಳನ್ನೂ ಕೊಟ್ಟಿದೆ. ಈ ಚಿತ್ರದ ಸಂಭಾಷಣೆಯಲ್ಲಿ ಜೊತೆಗಿದ್ದ ಗುರು ಕಶ್ಯಪ್ ಮತ್ತು 20 ವರ್ಷದಿಂದ ನನಗೆ ಮೇಕಪ್ ಮ್ಯಾನ್ ಆಗಿದ್ದ ಸೂರಿ ಬಾಬು ಇಬ್ಬರನ್ನೂ ಇದೇ ಟೈಮ್ನಲ್ಲಿ ಕಳೆದುಕೊಂಡಿದ್ದೇನೆ ಎನ್ನುವ ರಮೇಶ್, ಈ ಚಿತ್ರ ಖಂಡಿತಾ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುತ್ತೆ ಮತ್ತು ಇಷ್ಟವಾಗುತ್ತೆ ಎನ್ನುತ್ತಾರೆ. ಅವರ ಕಾನ್ಫಿಡೆನ್ಸ್ ಗೆಲ್ಲಲಿ.