ಆವತ್ತು ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮುಗಿಸಿ ಬರುತ್ತಿದ್ದೆ. ದಾರಿಯಲ್ಲೇ ವಿಕ್ರಂ ಆಸ್ಪತ್ರೆ. ತುಂಬಾ ಜನ ಸೇರಿದ್ದರು. ಏನಾಗಿದೆ ಎಂದು ಕೇಳಿದಾಗ ಅಪ್ಪು ಆಸ್ಪತ್ರೆಯಲ್ಲಿದ್ದಾರೆ. ಆರೋಗ್ಯ ಸರಿ ಇಲ್ಲ ಎನ್ನುವ ವಿಷಯ ಗೊತ್ತಾಯ್ತು. ಒಳಗೆ ಹೋಗಿ ನೋಡುವಷ್ಟರಲ್ಲಿ ಎಲ್ಲ ಮುಗಿದುಹೋಗಿತ್ತು. ಜೀವನದಲ್ಲಿ ಮೊದಲ ಬಾರಿಗೆ ನಾನು ವೀಕ್, ಅಸಹಾಯಕ ಎನಿಸಿಬಿಟ್ಟಿತು.
ಮುಗಿಲ್ ಪೇಟೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್ ಪುನೀತ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ. ಅದೇ ದಿನ ರವಿಚಂದ್ರನ್ ತಾಯಿಯವರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಇಷ್ಟು ದಿನ ನಾನು ನನ್ನ ತಂದೆ ವೀರಸ್ವಾಮಿಯವರನ್ನು ನೆನಪಿಸಿಕೊಂಡು ಮಾತನಾಡುತ್ತಿದ್ದೆ. ಇನ್ನು ಮುಂದೆ ಅಪ್ಪನ ಜೊತೆ ಅಪ್ಪುನೂ ನೆನಪಿಸಿಕೊಳ್ಳಬೇಕು ಎಂದರು ರವಿ. ನಾನು ಪುನೀತ್ನನ್ನು ಮರೆಯಲು ಸಾಧ್ಯವಿಲ್ಲ. ನಾನು ಸತ್ತ ದಿನ ಅಪ್ಪುವನ್ನು ಮರೆಯಬಹುದು ಎಂದಿದ್ದ ರವಿ, ಇನ್ನೂ ಅಪ್ಪು ನಿಧನದ ಶಾಕ್ನಿಂದ ಹೊರಬಂದಿರಲಿಲ್ಲ.
ಇದರ ನಡುವೆಯೇ ರಿಲೀಸ್ ಆಗುತ್ತಿರುವ ಮುಗಿಲ್ ಪೇಟೆ ಸಿನಿಮಾ ಬಗ್ಗೆ ಮಾತನಾಡಿದ ರವಿಚಂದ್ರನ್, ಮನುರಂಜನ್, ಕಯಾದು ಅವರನ್ನು ಹೊಗಳಿದರು. ಹೊಸ ನಿರ್ದೇಶಕ ಭರತ್ ನಾವುಂದ ಅವರ ಶ್ರಮಕ್ಕೆ ಪ್ರತಿಫಲ ಸಿಗಲಿ ಎಂದು ಹಾರೈಸಿದರು. ನೀನು ಸ್ಟಾರ್ ಅಲ್ಲ. ಹೊಸಬ. ಹೊಸಬ ಎಂದುಕೊಂಡು ಕೆಲಸ ಮಾಡಿದರೆ, ಒಳ್ಳೆಯ ಸಿನಿಮಾ ಮಾಡುತ್ತಾ ಹೋದರೆ.. ಜನರೇ ನಿನ್ನನ್ನು ಸ್ಟಾರ್ ಮಾಡುತ್ತಾರೆ. ನನಗೆ ಕ್ರೇಜಿ ಸ್ಟಾರ್ ಎಂದು ಜನ ಕರೆಯಬಹುದು. ಆದರೆ, ನಾನು ಎಂದೆಂದಿಗೂ ಈಶ್ವರಿ ಸಂಸ್ಥೆಯ ವೀರಸ್ವಾಮಿ ಪುತ್ರ ಅಷ್ಟೆ ಎನ್ನುವ ಮೂಲಕ ಮನುರಂಜನ್ಗೆ ಸರಳತೆಯ ಪಾಠ ಹೇಳಿಕೊಟ್ಟರು.