ಕೆಜಿಎಫ್ ಚಾಪ್ಟರ್ 2. 2021ರಲ್ಲೇ ರಿಲೀಸ್ ಆಗಬೇಕಿದ್ದ ಸಿನಿಮಾ. ಇಡೀ ದೇಶದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕೆಜಿಎಫ್ ಚಾಪ್ಟರ್ ನಂ.1 ಸ್ಥಾನದಲ್ಲಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ನಟಿಸಿರುವ ಕೆಜಿಎಫ್, 2022ರ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಬ್ಯಾನರಿನ ಚಿತ್ರಕ್ಕೆ ಈ ಬಾರಿ ಚಾಲೆಂಜ್ ಹಾಕಿರೋದು ಅಮೀರ್ ಖಾನ್.
ಅದೇ ದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದೆ. ಫಾರೆಸ್ಟ್ ಗಂಪ್ ಅನ್ನೋ ಇಂಗ್ಲಿಷ್ ಸಿನಿಮಾದ ಸ್ಫೂರ್ತಿಯಲ್ಲಿ ಬರುತ್ತಿರೋ ಲಾಲ್ ಸಿಂಗ್ ಚಡ್ಡಾಗೆ ಅಮೀರ್ ಖಾನ್ ಹೀರೋ ಮತ್ತು ನಿರ್ಮಾಪಕ. ಕರೀನಾ ಕಪೂರ್ ಆ ಚಿತ್ರದ ನಾಯಕಿ. ಇದೇ ಚಿತ್ರದ ಮೂಲಕ ತೆಲುಗಿನ ನಾಗಚೈತನ್ಯ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ಏಪ್ರಿಲ್ 14ರಂದೇ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.
ಅಂದಹಾಗೆ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ, ಶಾರೂಕ್ ಖಾನ್ ಅಭಿನಯದ ಝೀರೋ ರಿಲೀಸ್ ಆಗಿತ್ತು. ಕೆಜಿಎಫ್ ಎದುರು ಪಲ್ಟಿ ಹೊಡೆದಿತ್ತು. ಈಗ ಅಮೀರ್ ಖಾನ್ ಸಿನಿಮಾ. ರಿಸಲ್ಟ್ ನೋಡೋಕೆ ಇನ್ನೂ 5 ತಿಂಗಳು ಕಾಯಬೇಕು.