ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನೀತ್ ಅವರಿಗೆ ಕರ್ನಾಟಕ ರತ್ನ ಘೋಷಿಸಿದರು.
ಈ ಪ್ರಶಸ್ತಿ ಪಡೆಯುತ್ತಿರುವ 10ನೇ ಹೆಮ್ಮೆಯ ಕನ್ನಡಿಗ ಪುನೀತ್ ರಾಜ್ ಕುಮಾರ್. 1992ರಲ್ಲಿ ಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿತ್ತು. ಆ ಪ್ರಶಸ್ತಿ ಪಡೆದ ಮೊದಲಿಗರು ಕುವೆಂಪು ಮತ್ತು ಡಾ.ರಾಜ್ ಕುಮಾರ್. ನನಗಿಂತ ಕುವೆಂಪು ಅವರು ಈ ಪ್ರಶಸ್ತಿಗೆ ಅರ್ಹರು ಎಂದಿದ್ದ ಡಾ.ರಾಜ್, ಪ್ರಶಸ್ತಿ ಪ್ರದಾನ ಮೊದಲಿಗೆ ಕುವೆಂಪು ಅವರಿಗೇ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಆಗ ಅನಾರೋಗ್ಯದಿಂದಾಗಿ ಹಾಸಿಗೆಯಲ್ಲಿದ್ದ ಕುವೆಂಪು ಅವರಿಗೆ ಮನೆಯಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ನಂತರ ಡಾ.ರಾಜ್ ವೇದಿಕೆಗೆ ಬಂದು ಗೌರವ ಸ್ವೀಕರಿಸಿದ್ದರು.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, , ಡಾ.ದೇವಿಶೆಟ್ಟಿ, ಶಿವಕುಮಾರ ಸ್ವಾಮೀಜಿ, ದೇ.ಜವರೇಗೌಡ ಮತ್ತು ವೀರೇಂದ್ರ ಹೆಗ್ಗಡೆ, ಭಾರತ ರತ್ನ ಪುರಸ್ಕೃತರೂ ಆಗಿರುವ ವಿಜ್ಞಾನಿ ಸಿಎನ್ಆರ್ ರಾವ್ ಹಾಗೂ ಭೀಮ್ಸೇನ್ ಜೋಷಿ ಇದಕ್ಕೂ ಮೊದಲು ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾದ ಹೆಮ್ಮೆಯ ಕನ್ನಡಿಗರು.