100. ಇದೇ ವಾರ ರಿಲೀಸ್ ಆಗುತ್ತಿರೋ ರಮೇಶ್ ನಟಿಸಿ ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ ಇದೆ. ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ತಂಗಿಯಾಗಿರೋದು ರಚಿತಾ ರಾಮ್. ಪುಷ್ಪಕವಿಮಾನದಲ್ಲಿ ಮಗಳಾಗಿದ್ದ ರಚಿತಾ, ಈಗ ತಂಗಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಅವರಿಗೆ ಅತ್ತಿಗೆಯಾಗಿ ಬಂದಿರೋದು ಪೂರ್ಣ.
ಈ ಪೂರ್ಣ ಮೂಲತಃ ಕೇರಳದವರು. ವೊರಿಜಿನಲ್ ಹೆಸರು ಶಮ್ನಾ ಕಾಸಿಮ್. ಹೆಚ್ಚು ಪ್ಯಾಪುಲರ್ ಆಗಿದ್ದು ತೆಲುಗಿನಲ್ಲಿ. ಅಲ್ಲಿ ಪೂರ್ಣ ಅವರನ್ನು ಘೋಸ್ಟ್ ಕ್ವೀನ್ ಎಂದೇ ಬ್ರಾಂಡ್ ಮಾಡಿದ್ದರು. ಕೆಲವು ದೆವ್ವದ ಚಿತ್ರಗಳಲ್ಲಿ ನಟಿಸಿ, ಅವೆಲ್ಲವೂ ಹಿಟ್ ಆದ ಕಾರಣ ಪೂರ್ಣ ಘೋಸ್ಟ್ ಕ್ವೀನ್ ಆಗಿದ್ದರು. ಕನ್ನಡದಲ್ಲಿ ಜೋಶ್ ಮತ್ತು ರಾಧನ್ ಗಂಡ ಚಿತ್ರದಲ್ಲಿ ನಟಿಸಿ ಹೋಗಿದ್ದವರು. ಈಗ 100 ಮೂಲಕ ಮತ್ತೆ ಬಂದಿದ್ದಾರೆ.
ಚಿತ್ರದಲ್ಲಿ ನನ್ನದು ಗೃಹಿಣಿಯ ಪಾತ್ರ. ರಮೇಶ್ ಅವರಿಗೆ ಪತ್ನಿ. ಹಳ್ಳಿ ಬ್ಯಾಕ್‍ಗ್ರೌಂಡ್‍ನಿಂದ ಬಂದಿರೋ ಮುಗ್ಧೆ. ಗಂಡನಿಗಿಂತ ಹೆಚ್ಚು ನಾದಿನಿ ರಚಿತಾ ರಾಮ್ ಜೊತೆ ಒಳ್ಳೆ ಬಾಂಧವ್ಯ ಇರೋ ಅತ್ತಿಗೆಯ ಪಾತ್ರ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿದೆ. ಥ್ರಿಲ್ ಆಗಿದ್ದೇನೆ ಎನ್ನುವ ಪೂರ್ಣ, ಅವಕಾಶ ಕೊಟ್ಟ ರಮೇಶ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಇದೇ ವಾರ ರಿಲೀಸ್ ಆಗುತ್ತಿದೆ.