ಹಂಸಲೇಖ. ನಾದಬ್ರಹ್ಮ ಎಂದೇ ಖ್ಯಾತರಾದವರು. ಚಿತ್ರರಂಗದ ಒಳಗೆ ವಿವಾದಗಳಿಲ್ಲದ ವ್ಯಕ್ತಿಯೇನಲ್ಲ. ಆದರೆ, ಚಿತ್ರರಂಗದ ಹೊರಗೆ ಅವರಿಗೆ ಇದ್ದ ಇಮೇಜ್ ಬೇರೆ. ಇದೇ ಮೊದಲ ಬಾರಿಗೆ ಹಂಸಲೇಖ ಒಂದು ವಿವಾದಕ್ಕೆ ಸಿಲುಕಿದ್ದಾರೆ. ಅದೂ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ `ಪೆಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಅದರಿಂದ ಯಾರಿಗೂ ಲಾಭವಿಲ್ಲ. ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಮೊಟ್ಟೆ ಕೊಟ್ಟರೆ ತಿಂತಾರಾ? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ಮಾಡಿಕೊಟ್ಟರೆ ತಿಂತಿದ್ರಾ..? ಮೇಲ್ಜಾತಿ ಜನ ಎಲ್ಲಿಗೇ ಹೋದರೂ ಮೇಲ್ಜಾತಿಯವರಂತೆಯೇ ವರ್ತಿಸುತ್ತಾರೆ. ಎಂದಿದ್ದರು. ಬಲಿತರು ದಲಿತರ ಮನೆಗೆ ಹೋಗೋದಲ್ಲ. ದಲಿತರನ್ನು ಬಲಿತರು ಮನೆಗೆ ಕರೆಸಿಕೊಂಡು ಅವರಿಗೆ ಊಟ ಹಾಕಿ, ಅವರ ತಟ್ಟೆ ತೊಳೆಯುವುರದಲ್ಲಿ ಸಮಾನತೆ ಇದೆ ಎಂದಿದ್ದರು ಹಂಸಲೇಖ.
ಇನ್ನು ಬಿಳಿಗಿರಿ ರಂಗಯ್ಯನ ವಿಷಯವನ್ನೂ ಹಂಸಲೇಖ ಹೀಗೇ ತಮ್ಮದೇ ಆದ ರೀತಿಯಲ್ಲಿ ವಿಡಂಬನೆ ಮಾಡಿದ್ದರು. ಬಿಳಿಗಿರಿ ರಂಗಯ್ಯ ಸೋಲಿಗರ ಹೆಣ್ಣು ಮಗಳನ್ನು ಪ್ರೀತಿಸಿ, ಆಕೆಯ ಮನೆಗೇ ಹೋಗಿ ಸಂಸಾರ ಮಾಡುತ್ತಾನೆ. ಮಾರನೇ ದಿನ ಕಲ್ಲಾಗುತ್ತಾನೆ. ಇದು ಕಥೆ. ಅದೊಂದು ಬೂಟಾಟಿಕೆ, ನಾಟಕ ಎನ್ನುವುದು ಹಂಸಲೇಖ ವಾದ. ಹಂಸಲೇಖ ಪ್ರಕಾರ ಬಿಳಿಗಿರಿ ರಂಗಯ್ಯ ಆ ಸೋಲಿಗರ ಹೆಣ್ಣನ್ನು ತನ್ನ ಮನೆಗೆ ಕರೆತಂದು ಸಂಸಾರ ಮಾಡಬೇಕಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹಂಸಲೇಖ ವಿರುದ್ಧ ಜನರೇ ತಿರುಗಿಬಿದ್ದರು. ಅದರಲ್ಲೂ ಪೇಜಾವರ ಶ್ರೀ ಅಭಿಮಾನಿಗಳು ಹಂಸಲೇಖ ಅವರು ಜಾಡಿಸಿದರು. ಬಿಳಿಗಿರಿ ರಂಗಯ್ಯನ ವಿಷಯ, ಅದೇ ಕಾರ್ಯಕ್ರಮದಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡಿದ್ದು.. ಎಲ್ಲವೂ ಹಂಸಲೇಖ ವಿರುದ್ಧ ಜನರು ತಿರುಗಿಬೀಳಲು ಕಾರಣವಾಯ್ತು.
ಕೊನೆಗೆ ಹಂಸಲೇಖ ಕ್ಷಮೆಯಾಚನೆ ಮಾದರಿಯಲ್ಲಿ ಒಂದು ತಪ್ಪೊಪ್ಪಿಗೆ ಹೇಳಿಕೆ ವಿಡಿಯೋ ಬಿಟ್ಟರು.
ಮೊದಲಿಗೆ ಕ್ಷಮೆ ಇರಲಿ, ಎರಡನೆಯದಾಗಿಯೂ ಕ್ಷಮೆ ಇರಲಿ. ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ. ಅಸ್ಪøಶ್ಯತೆ ತೊಡೆದು ಹಾಕಲು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಆಡಿದ ಕೆಲ ಮಾತುಗಳು ನನ್ನ ಹೆಂಡತಿಗೂ ಇಷ್ಟವಾಗಲಿಲ್ಲ. ಆಕೆಯ ಕ್ಷಮೆಯನ್ನೂ ಕೇಳಿದ್ದೇನೆ ಎಂದಿದ್ದಾರೆ ಹಂಸಲೇಖ.
ಆದರೆ.. ಕ್ಷಮೆ ಕೇಳುತ್ತಲೇ ಎಲ್ಲ ಮಾತುಗಳೂ ವೇದಿಕೆಗೆ ಅಲ್ಲ ಎನ್ನುವ ಮೂಲಕ ಎಂದಿರುವ ಹಂಸಲೇಖ ಅವರ ಮಾತನ್ನು ಹಲವರು ಒಪ್ಪಿಲ್ಲ. ಕ್ಷಮೆ ಕೇಳುತ್ತಿರುವುದು ಕೇವಲ ನಾಟಕ. ಹಂಸಲೇಖ ಈ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ ಹಲವರು. ಪರ ವಿರೋಧ ಚರ್ಚೆಗಳ ಮಧ್ಯೆ ಹಂಸಲೇಖ ವಿರುದ್ಧ ಪ್ರತಿಭಟನೆ ಕೂಗುಗಳೂ ಕೇಳಿ ಬರುತ್ತಿವೆ.