` ಆಘಾತದಿಂದ ಇನ್ನೂ ಹೊರಬರದ ರಾಘಣ್ಣ : ಪ್ರತಿದಿನ ಸಮಾಧಿಗೆ ಭೇಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಆಘಾತದಿಂದ ಇನ್ನೂ ಹೊರಬರದ ರಾಘಣ್ಣ : ಪ್ರತಿದಿನ ಸಮಾಧಿಗೆ ಭೇಟಿ
Raghavedra Rajkumar Image

ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ಇಡೀ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್. ಈಗಲೂ ಎಷ್ಟೋ ಜನ ಈ ಸುದ್ದಿ ನಿಜವೋ.. ಸುಳ್ಳೋ.. ಅರ್ಥವಾಗುತ್ತಿಲ್ಲ ಅನ್ನುತ್ತಿದ್ದಾರೆ. ಅಪ್ಪು ಮರಣ ಸಂಭವಿಸಿದ ದಿನ ಎಲ್ಲರಿಗೂ ಧೈರ್ಯ ಹೇಳಬೇಕಿದ್ದ ಮನೆ ಹಿರಿಯ ಶಿವಣ್ಣ, ಬಿಕ್ಕಿ ಬಿಕ್ಕಿ ಅತ್ತು ಕುಸಿದು ಬಿದ್ದರು. ಆಗ ಎಲ್ಲರೆದುರು ಬಂದು ಮಾತನಾಡಿದ್ದು ರಾಘವೇಂದ್ರ ರಾಜ್‍ಕುಮಾರ್. ಆದರೆ.. ಈಗ ನೋಡಿದರೆ ಪರಿಸ್ಥಿತಿಯೇ ಬೇರೆ. ಶಿವಣ್ಣ ನಾನಿನ್ನು ಅಳೋದಿಲ್ಲ. ಅವನ ಕೆಲಸಗಳನ್ನು ಮುಂದುವರಿಸೋಕೆ ಏನು ಮಾಡಬೇಕು ನೋಡೋಣ.. ಎಂದು ಧೈರ್ಯ ತೆಗೆದುಕೊಂಡಿದ್ದರೆ, ಆಘಾತದಿಂದ ಹೊರಬರದೇ ಇರೋದು ರಾಘವೇಂದ್ರ ರಾಜ್‍ಕುಮಾರ್.

ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸ್ಟ್ರೋಕ್ ಆದಾಗ ದೊಡ್ಮನೆಯ ಇಡೀ ಕುಟುಂಬ ಜೊತೆಗೆ ನಿಂತು ಆರೈಕೆ ಮಾಡಿತ್ತು. ಭಾವುಕರಾಗಿದ್ದ ರಾಘವೇಂದ್ರ ರಾಜ್‍ಕುಮಾರ್ ಅಣ್ಣನನ್ನು ತಂದೆಯ ಸ್ಥಾನಕ್ಕೇರಿಸಿದ್ದರು. ಅತ್ತಿಗೆ, ಪತ್ನಿಯನ್ನು ತಾಯಿಯ ಸ್ಥಾನಕ್ಕೇರಿಸಿದ್ದರು. ಅಪ್ಪು ನನ್ನ ಮಗ ಎನ್ನುತ್ತಿದ್ದ ರಾಘಣ್ಣ, ಇಡೀ ಕುಟುಂಬದ ಜೊತೆ ಚೆಂದದ ಬಾಂಧವ್ಯ ಇಟ್ಟುಕೊಂಡಿದ್ದರು. ಮನೆಯೂ ಪಕ್ಕದಲ್ಲೇ ಇತ್ತು. ಅಂತ್ಯಕ್ರಿಯೆ ವೇಳೆ ಬಂಡೆಯಂತೆ ನಿಂತಿದ್ದ ರಾಘಣ್ಣ, ಈಗ ಪ್ರತಿದಿನವೂ ಸಮಾಧಿಗೆ ಹೋಗುತ್ತಿದ್ದಾರೆ. ದಿನಕ್ಕೆರಡು ಬಾರಿ.. ತಮ್ಮನ ಸಾವಿನ ಆಘಾತ ಅವರನ್ನು ಇನ್ನೂ ಇನ್ನೂ ಕಾಡುತ್ತಲೇ ಇದೆ. ಈಗ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಈ ಶಾಕ್‍ನಿಂದ ಹೊರತರಲು ಇಡೀ ಕುಟುಂಬ ಹೆಣಗುತ್ತಿದೆ.