ನಟಿ ರಾಧಿಕಾ ಪಂಡಿತ್ ಅವರು ಬುಧವಾರ ಹಾಕಿದ ಒಂದು ಪೋಸ್ಟ್‍ಗೆ ಅಭಿಮಾನಿಗಳು ಗರಂ ಆಗಿಬಿಟ್ಟರು. ಅಪ್ಪು ಅಗಲಿಕೆ ನೋವು ಸಹಿಸೋಕೆ ಆಗುತ್ತಿಲ್ಲ ಎಂದು ಹಾಕಿದ ತಕ್ಷಣ, ನೀವ್ಯಾಕೆ ಅಪ್ಪು ಅಂತ್ಯಸಂಸ್ಕಾರಕ್ಕೆ, ದರ್ಶನಕ್ಕೆ ಬರಲಿಲ್ಲ ಎಂದು ಕೆಂಡ ಕಾರೋಕೆ ಶುರು ಮಾಡಿದರು. ನಾನು ಬಂದಿದ್ದು ದೊಡ್ಮನೆಯವರಿಗೆ ಗೊತ್ತು. ಕ್ಯಾಮೆರಾ ಎದುರು ಮಾತನಾಡದೇ ಹೋದರೆ ತಪ್ಪು ಎಂದು ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳಿ ಎಂದು ರಾಧಿಕಾ ಪಂಡಿತ್ ಹೇಳಿದರೂ ಕೆಲವು ಅಭಿಮಾನಿಗಳು ಕೇಳೋಕೆ ತಯಾರಿ ಇರಲಿಲ್ಲ. ಕೊನೆಗೆ ರಾಧಿಕಾ ಪಂಡಿತ್ ಅವರು ದರ್ಶನಕ್ಕೆ ಬಂದಿದ್ದ ವಿಡಿಯೋ ಹೊರಬಿತ್ತು.
ಸಾವಿರಾರು ಅಭಿಮಾನಿ ದೇವರುಗಳ ಮಧ್ಯೆ ಸ್ವತಃ ರಾಧಿಕಾ ಪಂಡಿತ್ ಬಂದಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಕಣ್ಣೀರಿಡುತ್ತಲೇ ಅಪ್ಪು ದರ್ಶನ ಪಡೆದು ಹೋಗಿದ್ದಾರೆ ರಾಧಿಕಾ ಪಂಡಿತ್. ಮುಖಕ್ಕೆ ಮಾಸ್ಕ್ ಹಾಕಿದ್ದ ಕಾರಣ ರಾಧಿಕಾ ಅವರ ಗುರುತು ಸಡನ್ ಆಗಿ ಗೊತ್ತಾಗುವುದಿಲ್ಲ. ದರ್ಶನ ಪಡೆದ ನಂತರ ರಾಧಿಕಾ ಯಾವುದೇ ಚಾನೆಲ್ಲಿನ ಕ್ಯಾಮೆರಾಗೂ ಮಾತನಾಡಿಲ್ಲ. ಹೀಗಾಗಿ ಕೆಲವು ಅಭಿಮಾನಿಗಳು ರಾಧಿಕಾ ಪಂಡಿತ್ ಬಂದೇ ಇಲ್ಲ ಎಂದು ತಪ್ಪು ತಿಳಿದು ಟೀಕಿಸಿದ್ದಾರೆ.
ಇಲ್ಲಿ ತಪ್ಪು ಕೆಲವು ಅಭಿಮಾನಿಗಳದ್ದೇ ಹೊರತು ರಾಧಿಕಾ ಪಂಡಿತ್ ಅವರದ್ದಲ್ಲ. ರಾಧಿಕಾ ಒಬ್ಬರೇ ಅಲ್ಲ, ಚಿತ್ರರಂಗದ ಹಲವರು ದರ್ಶನಕ್ಕೆ ಬಂದಿದ್ದಾರೆ. ನೂರಾರು ಜನ ಕ್ಯಾಮೆರಾಗಳಿಗೆ ಮಾತನಾಡಿಲ್ಲ. ಹಾಗೆಂದು ಅವರು ಬಂದಿಲ್ಲ ಎಂದರ್ಥವಲ್ಲ. ಅಪ್ಪು ಅವರನ್ನು ದ್ವೇಷಿಸುವ ಒಬ್ಬರೇ ಒಬ್ಬರು ಚಿತ್ರರಂಗದಲ್ಲಿಲ್ಲ. ಅಪ್ಪು ಪ್ರೀತಿಯನ್ನಷ್ಟೇ ಹಂಚಿ, ಪ್ರೀತಿಯನ್ನಷ್ಟೇ ತೆಗೆದುಕೊಂಡು ಹೋದ ಜೀವ ಎನ್ನುವುದರಲ್ಲಿ ಎರಡು ಮಾತಿಲ್ಲ.