ರಮೇಶ್ ಚಿತ್ರಗಳೆಂದರೆ ಫ್ಯಾಮಿಲಿ ಓರಿಯಂಟೆಡ್, ಕಾಮಿಡಿ ಅಥವಾ ಲವ್ ಸ್ಟೋರಿ ಎಂದುಕೊಳ್ಳುವವರಿಗೆ ರಮೇಶ್ 100 ಚಿತ್ರದ ಮೂಲಕ ಥ್ರಿಲ್ ಕೊಡಲು ಬರುತ್ತಿದ್ದಾರೆ. ಅದೂ.. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‍ಗಳ ಮೂಲಕ. ಯೆಸ್, 100ನಲ್ಲಿ 4 ಸಖತ್ ಫೈಟಿಂಗ್ ಇವೆ. ಎಲ್ಲವೂ ಟೆಕ್ನಿಕಲಿ ವ್ಹಾವ್ ಎನ್ನುವಂತಿರೋದು ವಿಶೇಷ.
ನನ್ನ ಸಿನಿಮಾದಲ್ಲಿ ಫೈಟ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ನನಗೆ ಸಾಹಸ ದೃಶ್ಯಗಳನ್ನು ತುರುಕಲು ಇಷ್ಟವಿಲ್ಲ. ಅವು ಕಥೆಗೆ ಪೂರಕವಾಗಿಯೇ ಇರಬೇಕು. ಹೀರೋ ವಿಲನ್‍ಗೆ ಹೊಡೆಯುತ್ತಾನೆ ಎಂದರೆ ಅದಕ್ಕೊಂದು ಬಲವಾದ ಕಾರಣವಿರಬೇಕು. 100ನಲ್ಲಿ ಆ ರೀತಿಯ ಸೀಕ್ವೆನ್ಸ್ ಬೇಕಿತ್ತು. ಅದಕ್ಕೆಂದೇ ಫೈಟ್ಸ್ ಇವೆ ಎಂದಿದ್ದಾರೆ.
ನಾಲ್ಕು ಫೈಟುಗಳಲ್ಲಿ ಎರಡನ್ನು ರವಿವರ್ಮ ಡೈರೆಕ್ಟ್ ಮಾಡಿದ್ದರೆ, ಇನ್ನೆರಡು ಫೈಟ್‍ಗಳನ್ನು ಜಾಲಿ ಬಾಸ್ಟಿನ್ ಮಾಡಿದ್ದಾರೆ. ಒಂದು ಚೇಸಿಂಗ್‍ನಲ್ಲಿ 100-150 ಕಾರುಗಳನ್ನು ಬಳಸಲಾಗಿದೆ. ಒಂದಿಡೀ ರಸ್ತೆಯನ್ನೇ ಬಾಡಿಗೆಗೆ ತೆಗೆದುಕೊಂಡು ಸಾಹಸ ದೃಶ್ಯ ಚಿತ್ರೀಕರಿಸಲಾಗಿದೆ ಎಂದು ಸಾಹಸ ದೃಶ್ಯಗಳ ಬಗ್ಗೆ ಹೇಳುತ್ತಲೇ ಥ್ರಿಲ್ಲಾಗುತ್ತಾರೆ ರಮೇಶ್. ಏಕೆಂದರೆ ಈ ಚಿತ್ರಕ್ಕೆ ತೆರೆಯ ಮೇಲಿನ ಮತ್ತು ತೆರೆಯ ಹಿಂದಿನ ಹೀರೋ ಅವರೇ. ಡೈರೆಕ್ಟರ್ ಕಮ್ ಹೀರೋ ರಮೇಶ್.
ರಮೇಶ್ ಅವರಿಗೆ ರಚಿತಾ ರಾಮ್ ತಂಗಿಯಾಗಿದ್ದರೆ, ಪೂರ್ಣ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಮೇಶ್ ಇನ್ಸ್‍ಪೆಕ್ಟರ್. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಇದೇ ನವೆಂಬರ್ 12ರಂದು ರಿಲೀಸ್ ಆಗುತ್ತಿದೆ.