ನಾವಿಬ್ಬರೂ 8 ವರ್ಷಗಳ ಹಿಂದೆ ಒಂದೇ ದಿನ ಚಿತ್ರರಂಗಕ್ಕೆ ಕಾಲಿಟ್ಟವರು. ರಚಿತಾ ಅವರ ಬುಲ್ ಬುಲ್ ತೆರೆ ಕಂಡ ದಿನವೇ, ನನ್ನ ಅಭಿನಯದ ಮದರಂಗಿ ರಿಲೀಸ್ ಆಗಿತ್ತು. ಈಗ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದೇವೆ ಎಂದವರು ಮದರಂಗಿ ಕೃಷ್ಣ. ಆ ಚಿತ್ರದ ಡಾರ್ಲಿಂಗ್ ಡಾರ್ಲಿಂಗ್ ಹಾಡಿನಿಂದ ಡಾರ್ಲಿಂಗ್ ಕೃಷ್ಣ ಆದವರು, ಈಗ ಲವ್ ಮಾಕ್ಟೇಲ್ ಕೃಷ್ಣನಾಗಿದ್ದಾರೆ. ಈಗ ಲವ್ ಮಿ ಆರ್ ಹೇಟ್ ಮಿ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ರಚಿತಾ ರಾಮ್ ಹೀರೋಯಿನ್.
ಚಿತ್ರಕ್ಕೆ ದೀಪಕ್ ಗಂಗಾಧರ್ ಡೈರೆಕ್ಟರ್. ತಮ್ಮೊಂದಿಗೆ ಅಸಿಸ್ಟೆಂಟ್ ಆಗಿದ್ದ ದೀಪಕ್ ಗಂಗಾಧರ್ ಅವರ ಮೊದಲ ನಿರ್ದೇಶನದ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿ ಶುಭ ಕೋರಿದ್ದು ದಿನಕರ್ ತೂಗುದೀಪ. ಪತಿಯ ಚಿತ್ರಕ್ಕೆ ಕ್ಲಾಪ್ ಮಾಡಿದವರು ಮಿಲನಾ ನಾಗರಾಜ್.
ನಿರ್ಮಾಪಕ ಸುನಿಲ್ಗೆ ಮೊದಲಿಂದಲೂ ಸಿನಿಮಾ ಪ್ರೊಡ್ಯೂಸರ್ ಆಗಬೇಕು ಎನ್ನುವ ಆಸೆಯಿತ್ತಂತೆ. ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಸಂಭ್ರಮ ಶ್ರೀಧರ್ ಈ ಚಿತ್ರಕ್ಕೆ ಸಹನಿರ್ಮಾಪಕರೂ ಹೌದು. ಸಂಗೀತ ನಿರ್ದೇಶಕರೂ ಹೌದು. 5 ಹಾಡು ರೆಡಿಯಿವೆ. ಎಲ್ಲವೂ ಒಂದಕ್ಕಿಂತ ಒಂದು ಮೆಲೋಡಿಯಸ್ ಆಗಿಯೇ ಕೊಡುತ್ತೇನೆ ಅನ್ನೋ ಭರವಸೆಯನ್ನಂತೂ ಕೊಟ್ಟಿದ್ದಾರೆ.
ಚಿತ್ರಕ್ಕೆ ಟೈಟಲ್ ಲವ್ ಮಿ ಆರ್ ಹೇಟ್ ಮಿ. ಅದು ಅಣ್ಣಾವ್ರ ಸೂಪರ್ ಹಿಟ್ ಸಾಂಗ್ನ ಮೊದಲ ಸಾಲು. ಅದಕ್ಕೆ ಚ್ಯುತಿ ಬಾರದಂತೆ ಒಳ್ಳೆಯ ಸಿನಿಮಾ ಕೊಡುತ್ತೇವೆ ಅನ್ನೋ ಭರವಸೆ ಇಡೀ ಚಿತ್ರತಂಡದ್ದು.