ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಪಿಯನ್ನು ಹೊರಗೆಳೆದು ತಂದು ಪೊಲೀಸರಿಗೆ ಒಪ್ಪಿಸಿರುವುದೂ ಸ್ವತಃ ದರ್ಶನ್ ಅವರೇ. ಇದೆಲ್ಲ ಆಗಿರೋದು ಮೈಸೂರಿನಲ್ಲಿ.
ದರ್ಶನ್ ಅವರ ಹೆಸರಲ್ಲಿರೋ ಆಸ್ತಿಯನ್ನು ಅಡಮಾನ ಇಟ್ಟು, ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ಸಾಲ ಪಡೆಯುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲವನ್ನೂ ಮಾಡಿರೋದು ತಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಅರುಣಾ ಕುಮಾರಿ ಅನ್ನೋ ಮಹಿಳೆ. ಆದರೆ ಆಕೆ ಬ್ಯಾಂಕ್ ಮ್ಯಾನೇಜರ್ ಅಲ್ಲ ಹಾಗೂ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ಗೊತ್ತಾಗಿದ್ದೇ ತಡ ದರ್ಶನ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ನಿರ್ಮಾಪಕ ಉಮಾಪತಿಯವರೂ ದೂರು ಕೊಟ್ಟಿದ್ದಾರೆ. ಏಕೆಂದರೆ ಇಡೀ ಪ್ರಕರಣದಲ್ಲಿ ಆ ಮಹಿಳೆ ಮೊದಲು ಕಾಂಟ್ಯಾಕ್ಟ್ ಮಾಡಿದ್ದೇ ಉಮಾಪತಿ ಅವರನ್ನ. ಸದ್ಯಕ್ಕೆ ಬೆಂಗಳೂರು ಮತ್ತು ಮೈಸೂರು ಎರಡೂ ಕಡೆ ಕೇಸ್ ದಾಖಲಾಗಿದೆ.
ನನ್ನ ಆಸ್ತಿಪತ್ರ ಪೋರ್ಜರಿಯಾಗಿದೆ ಅನ್ನೋದು ತಿಂಗಳ ಹಿಂದೆ ಗೊತ್ತಾಗಿತ್ತು. ಬಂಧಿತ ಆರೋಪಿ ಬಾಯಿಬಿಟ್ಟರೆ ಎಲ್ಲ ಗೊತ್ತಾಗುತ್ತೆ. ನನ್ನ ಸ್ನೇಹಿತರೇ ಏನಾದರೂ ಇದನ್ನು ಮಾಡಿದ್ದರೆ ಅವರನ್ನೂ ಬಿಡಲ್ಲ. ಸುಮ್ಮನೆ ಮಾತ್ಯಾಕೆ. ವಿಷಯ ಕಂಪ್ಲೀಟ್ ಆಗಿ ಹೊರಬರಲಿ. ರೆಕ್ಕೆ ಪುಕ್ಕ ಅಲ್ಲ, ತಲೆಯನ್ನೇ ತೆಗೆಯೋಣ ಎಂದಿದ್ದಾರೆ ದರ್ಶನ್.