ಚಲನಚಿತ್ರ ರಂಗ ಸಂಕಷ್ಟದಲ್ಲಿದೆ. ಅದರಲ್ಲೂ ಕಾರ್ಮಿಕರು, ತಂತ್ರಜ್ಞರು ಮತ್ತು ಸಹಕಲಾವಿದರ ಕುಟುಂಬಗಳಂತೂ ಕಣ್ಣೀರಿನಲ್ಲೇ ಕೈತೊಳೆಯುತ್ತಿವೆ. ನಡುವಿನ 2 ತಿಂಗಳು ಹೊರತುಪಡಿಸಿದರೆ, ಹೆಚ್ಚೂ ಕಡಿಮೆ ಒಂದು ವರ್ಷದಿಂದ ಚಿತ್ರರಂಗದ ಕಾರ್ಮಿಕರಿಗೆ ಕೆಲಸ ಇಲ್ಲ. ಈ ಸಂದರ್ಭದಲ್ಲಿ ಯಶ್ 1 ಕೋಟಿ 80 ಲಕ್ಷ, ಪುನೀತ್ ರಾಜ್‍ಕುಮಾರ್ 10 ಲಕ್ಷ ರೂ. ದೇಣಿಗೆ ನೀಡಿದ್ದರು. ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ್ದರು.
ಈಗ ಹೊಂಬಾಳೆ ಫಿಲಮ್ಸ್ ಕೂಡಾ ಕಾರ್ಮಿಕರ ಕಷ್ಟಕ್ಕೆ ಧಾವಿಸಿ ಬಂದಿದೆ. ಕಾರ್ಮಿಕರ ಒಕ್ಕೂಟದ 21 ವಿಭಾಗದ ಒಟ್ಟಾರೆ 3200 ಕಾರ್ಮಿಕರಿಗೆ ನೆರವಾಗಲು 32 ಲಕ್ಷ ರೂ. ದೇಣಿಗೆ ನೀಡಿದೆ.
ಪ್ರತಿಯೊಬ್ಬ ಕಾರ್ಮಿಕರಿಗೂ ತಲಾ 1 ಸಾವಿರ ರೂ. ನೀಡುತ್ತಿದ್ದಾರೆ ಹೊಂಬಾಳೆ ಫಿಲಮ್ಸ್‍ನ ವಿಜಯ್ ಕಿರಗಂದೂರು. ವಿಜಯ್ ಕಿರಗಂದೂರು ಅವರ ಈ ದೇಣಿಗೆಗೆ ಚೇಂಬರ್‍ನ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಧನ್ಯವಾದ ಸಲ್ಲಿಸಿದ್ದಾರೆ.
ವಿಜಯ್ ಕಿರಗಂದೂರು ಅವರ ಕೋವಿಡ್ ಸೇವೆ ಇದೇ ಮೊದಲಲ್ಲ. ಕೋವಿಡ್ 2ನೇ ಅಲೆಯಲ್ಲಿ ಸಂಕಷ್ಟದಲ್ಲಿದ್ದಾಗ ಮಂಡ್ಯ ಜಿಲ್ಲಾಧಿಕಾರಿಗಳಿಗೆ 50 ಲಕ್ಷ ರೂ. ದೇಣಿಗೆ ನೀಡಿ, ಕೋವಿಡ್ ಮೂಲಭೂತ ಸೌಕರ್ಯಕ್ಕೆ ಬಳಸಿಕೊಳ್ಳಲು ಮನವಿ ಮಾಡಿದ್ದರು. ತಮ್ಮ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಹಾಕಿಸುತ್ತಿರುವ ವಿಜಯ್ ಕಿರಗಂದೂರು ಕೋವಿಡ್ ಸಂತ್ರಸ್ತರಿಗೆ ನೆರವು ನೀಡಲು ತಮ್ಮ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಹ್ಯಾಟ್ಸಾಫ್ ವಿಜಯ್ ಕಿರಗಂದೂರು.