ಉಗ್ರಂ ಚಿತ್ರದ ಮೂಲಕ ತಮ್ಮ ಪ್ರತಿಭೆ ಸಾಬೀತು ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, ಕೆಜಿಎಫ್ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದು ಗೊತ್ತೇ ಇದೆ. ಕೆಜಿಎಫ್ ಚಾಪ್ಟರ್ 2 ಇನ್ನೂ ಬಿಡುಗಡೆಯಾಗಬೇಕಿದೆ. ಕೆಜಿಎಫ್ ಚಾಪ್ಟರ್ 2 ಮುಗಿಸಿದ ನಂತರ ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಚಿತ್ರ ಮಾಡುತ್ತಿರುವ ಪ್ರಶಾಂತ್ ನೀಲ್, ಮುಂದಿನ ಚಿತ್ರವನ್ನೂ ಟಾಲಿವುಡ್‍ನ ಮತ್ತೊಬ್ಬ ಸೂಪರ್ ಸ್ಟಾರ್ ಎನ್‍ಟಿಆರ್ ಜೊತೆಗೆ ಮಾಡಲು ರೆಡಿಯಾಗಿದ್ದಾರೆ.
ಎನ್‍ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಮೈತ್ರಿ ಮೂವಿ ಮೇಕರ್ಸ್. ರಂಗಸ್ಥಳಂ, ಶ್ರೀಮಂತುಡು, ಜನತಾ ಗ್ಯಾರೇಜ್, ಉಪ್ಪೆನದಂತಹ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿರುವ ಸಂಸ್ಥೆ ಮೈತ್ರಿ. ಎನ್‍ಟಿಆರ್ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಪ್ರಾಜೆಕ್ಟ್ ಘೋಷಿಸಿದೆ ಮೈತ್ರಿ. ಪ್ರಶಾಂತ್ ನೀಲ್ ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಬೆಲೆ ಬಾಳುವ ಮಣ್ಣು, ರಕ್ತದಲ್ಲಿ ನೆನೆದ ಮಣ್ಣು ಎನ್ನುವ ಲೈನ್ ಟ್ವೀಟ್ ಮಾಡುವ ಮೂಲಕ ಕಥೆ ಹೇಗಿರಬಹುದು ಅನ್ನೋ ಸುಳಿವನ್ನೂ ಕೊಟ್ಟಿದ್ದಾರೆ ಪ್ರಶಾಂತ್ ನೀಲ್.