2016ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಕಿರಿಕ್ ಪಾರ್ಟಿ ಚಿತ್ರದ ಟೀಂಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಕಾಪಿರೈಟ್ ವಿಚಾರರದಲ್ಲಿ ಶುರುವಾದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಳಕೆಯಾದ
ಹೇ ಹೂ ಆರ್ ಯೂ ಹಾಡಿನಲ್ಲಿ ಬಳಸಿದ್ದ ಒಂದು ಮ್ಯೂಸಿಕ್ ಬಿಟ್, ಶಾಂತಿ ಕ್ರಾಂತಿ ಚಿತ್ರದ ಮಧ್ಯರಾತ್ರೀಲಿ ಹೈವೇ ರಸ್ತೇಲಿ.. ಚಿತ್ರದ ಬಿಟ್ನ್ನು ಹೋಲುತ್ತಿದೆ. ಇದು ಕಾಪಿರೈಟ್ ಉಲ್ಲಂಘನೆ ಎಂದು ಲಹರಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಕ್ರಿಮಿನಲ್ ಕೇಸ್ ಹಾಕಿತ್ತು.
ಕಾಪಿರೈಟ್ಸ್ ಆಕ್ಟ್ 63a, 63b ಅನ್ವಯ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ 9ನೇ ಎಸಿಎಂಎಂ ಕೋರ್ಟ್ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮೇ 27ಕ್ಕೆ ಅಥವಾ ಅದಕ್ಕೂ ಮುನ್ನ ಚಿತ್ರತಂಡವನ್ನು ಅಂದರೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಅಜನೀಶ್ ಲೋಕನಾಥ್ ಮೊದಲಾದವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಅದೇಶಿಸಿದೆ. ಇಲ್ಲಿಯವರೆಗೆ 8 ಬಾರಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದರೂ, ಚಿತ್ರತಂಡ ಸರಿಯಾಗಿ ಸ್ಪಂದಿಸಿಲ್ಲ ಎನ್ನುವುದೇ ಈ ಜಾಮೀನು ರಹಿತ ವಾರೆಂಟ್ಗೆ ಕಾರಣ.
ಈ ಹಿಂದೆ ಅರೆಸ್ಟ್ ವಾರೆಂಟ್ ಜಾರಿಯಾದಾಗ ರಕ್ಷಿತ್ ಶೆಟ್ಟಿ ಇದು ಹೊಸ ಕೇಸ್. ಈ ಕೇಸ್ನ ನೋಟಿಸ್ ಕೂಡಾ ನಮಗೆ ತಲುಪಿಲ್ಲ. ಮೊದಲ ಬಾರಿ ಕೇಸ್ ಹಾಕಿದಾಗ ಕೋರ್ಟ್ ಕೇಸ್ ಮುಗಿಯುವವರೆಗೆ ನಾವು ಸಿನಿಮಾದಲ್ಲಿ ಹಾಡನ್ನು ತೋರಿಸಿಯೇ ಇರಲಿಲ್ಲ. ಆದರೆ, 2016ರ ಅಕ್ಟೋಬರ್ನಲ್ಲಿ ಕೇಸ್ ಗೆದ್ದ ಬಳಿಕ ಹಾಡನ್ನು ರಿಲೀಸ್ ಮಾಡಿದ್ದೆವು. ಚಿತ್ರಕ್ಕೆ ತೊಂದರೆಯಾಗದಿರಲಿ ಎಂಬ ಏಕೈಕ ಕಾರಣಕ್ಕೆ, ಲಹರಿ ಸಂಸ್ಥೆಗೆ ನಾವು 20 ಲಕ್ಷ ಕೊಟ್ಟು ಆ ಕೇಸ್ ಬಗೆಹರಿಸಿಕೊಂಡಿದ್ದೇವೆ. ಇದು ಲಹರಿ ಸಂಸ್ಥೆಯ ಕುತಂತ್ರ ಎಂದಿದ್ದರು ರಕ್ಷಿತ್ ಶೆಟ್ಟಿ.
ಸಿನಿಮಾ ರಿಲೀಸ್ಗೆ ಇದ್ದ ತಡೆಯನ್ನು ಅವರು ನಿವಾರಿಸಿಕೊಂಡಿದ್ದರೇ ಹೊರತು, ಕೇಸ್ ಗೆದ್ದಿರಲಿಲ್ಲ. ಪ್ರಕರಣ ಇತ್ಯರ್ಥವೂ ಆಗಿರಲಿಲ್ಲ. ಕೇಸ್ ಇನ್ನೂ ಕೋರ್ಟಿನಲ್ಲೇ ಇದೆ ಎಂದಿದ್ದರು ಲಹರಿ ವೇಲು.
ಪ್ರಕರಣ ಇನ್ನೂ ಮುಗಿದಿಲ್ಲ ಎನ್ನುವುದು ಈಗ ಗೊತ್ತಾಗಿದೆ. ಅರೆಸ್ಟ್ ಆಗುತ್ತಾರೋ.. ಇಲ್ಲವೋ.. ಹೇಳೋಕೆ ಸಾಧ್ಯವಿಲ್ಲ. ಇದು ನ್ಯಾಯಾಲಯದ ವಿಷಯ. ವಿವಾದವಂತೂ ಜೀವಂತವಾಗಿದೆ.