ಒಂದಲ್ಲ..ಎರಡಲ್ಲ.. ಹೀರೋ ಚಿತ್ರದಲ್ಲಿ ಹಲವು ಸ್ಪೆಷಲ್ಲುಗಳಿವೆ. ಇದು ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿರೋ 2ನೇ ಸಿನಿಮಾ. ಬೆಲ್ ಬಾಟಂ ಅನ್ನೋ ಸೂಪರ್ ಹಿಟ್ ಕೊಟ್ಟ ನಂತರ ರಿಷಬ್ ಶೆಟ್ಟಿ ನಟಿಸಿದ್ದಾರಾದರೂ ಕಂಪ್ಲೀಟ್ ಹೀರೋ ಆಗಿರಲಿಲ್ಲ. ಅವರದ್ಧೇ ಕಥಾ ಸಂಗಮದಲ್ಲಿ ಒಂದು ಕಥೆಯಲ್ಲಿ ಹೀರೋ ಆಗಿದ್ದವರು, ಅವನೇ ಶ್ರೀಮನ್ನಾರಾಯಣದಲ್ಲಿ ಸೆಕೆಂಡ್ ಹೀರೋ (ಸೆಕೆಂಡುಗಳ ಕಾಲವಷ್ಟೇ ತೆರೆಯ ಮೇಲಿರೋ ಹೀರೋ) ಆಗಿದ್ದರು. ಈಗ ಹೀರೋ ಮೂಲಕ ಹೀರೋ ಆಗಿ ಹೀರೋ ತರಾನೇ ಎಂಟ್ರಿ ಕೊಡ್ತಿದ್ಧಾರೆ.
ಅಂದಹಾಗೆ ಹೀರೋ ಆಗಿದ್ದರೂ, ಹೀರೋ ತರಾ ಬಿಲ್ಡಪ್ ಇಲ್ಲ ಅನ್ನೋದು ಈ ಚಿತ್ರದ ಇನ್ನೊಂದು ವಿಶೇಷ.
ಇಡೀ ಚಿತ್ರದಲ್ಲಿ ಕೆಲಸ ಮಾಡಿರೋದು 24 ಜನರ ಟೀಂ. ಅರೆ ಒಂದು ಸಿನಿಮಾನ ಕೇವಲ 24 ಜನ ಮುಗಿಸೋಕೆ ಸಾಧ್ಯನಾ ಎಂದುಕೊಳ್ಳಬೇಡಿ. ಅನಿವಾರ್ಯವಾಗಿ, ಕೊರೊನಾ ಲಾಕ್ ಡೌನ್ ನಿಯಮಗಳನ್ನೆಲ್ಲ ಕಡ್ಡಾಯವಾಗಿ ಪಾಲಿಸಿದ್ದ ಕಾರಣಕ್ಕೆ ಇಡೀ ತಂಡದಲ್ಲಿ ಕೆಲಸ ಮಾಡಿದ್ದು ಕೇವಲ 24 ಜನ. ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಾನವಿ ಲಕ್ಷಣ್ ಹೊರತು ಪಡಿಸಿ ಉಳಿದ ಎಲ್ಲಾ ನಟರು ಸಿನಿಮಾದ ಟೆಕ್ನಿಕಲ್ ಟೀಂನವರೇ. ಅರ್ಥಾತ್.. ನಟರೂ ಅವರೇ. ಕೂಲಿಗಳೂ ಅವರೇ. ಟೆಕ್ನಿಷಿಯನ್ಸೂ ಅವರೇ.
ಇದುವರೆಗೆ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಸಾಹಸ ನಿರ್ದೇಶಕರೂ ಆಗಿದ್ದಾರೆ. ಅವರಿಗೆ ಜೊತೆ ನೀಡಿರೋದು ವಿಕ್ರಂ ಮೋರ್. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದು ಚಿತ್ರದ ಶೂಟಿಂಗ್ ಮುಗಿದ ಮೇಲೆ ಅನ್ನೋದು ಇನ್ನೊಂದು ಸ್ಪೆಷಾಲಿಟಿ.
ಕಾಮಿಡಿ, ಲವ್, ಆ್ಯಕ್ಷನ್ ಎಲ್ಲವೂ ಇರೋ ಸಿನಿಮಾದಲ್ಲಿ ಹೀರೋಯಿನ್ ಗಾನವಿ ಲಕ್ಷ್ಮಣ್. ಆಕೆಗೆ ಇದು ಮೊದಲ ಸಿನಿಮಾ. ಇನ್ನು ಡೈರೆಕ್ಟರ್ ಭರತ್ ರಾಜ್ ಎಂ. ಅವರಿಗೂ ಅಷ್ಟೆ, ಪ್ರಥಮ ಚುಂಬನ. ಅಫ್ಕೋರ್ಸ್.. ಭರತ್ ರಾಜ್ ನಿರ್ದೇಶನ ಕಲಿತಿದ್ದು ರಿಷಬ್ ಶೆ್ಟ್ಟಿ ಗರಡಿಯಲ್ಲೇ ಅನ್ನೋದು ಬೇರೆ ವಿಷಯ.
ಒಂದೇ ರಾತ್ರಿಯಲ್ಲಿ ಸಿದ್ಧವಾದ ಕಥೆಯಿದು. ರಣಹೇಡಿಯಾಗೋಕೆ ಸಿದ್ಧವಿದ್ದರೆ ಮಾತ್ರ ಹೀರೋ ಆಗೋಕೆ ಸಾಧ್ಯ ಅನ್ನೋ ಟ್ಯಾಗ್ಲೈನ್ನಲ್ಲಿ ಬರ್ತಿರೋ ಸಿನಿಮಾ ಹೀರೋ. ಇಷ್ಟೆಲ್ಲ ಸ್ಪೆಷಾಲಿಟಿಗಳಿರೋ ಹೀರೋ ಮಾರ್ಚ್ 5ಕ್ಕೆ ರಿಲೀಸ್ ಆಗ್ತಿದೆ.