ಆಶಾ ಭಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರಕ್ಕೆ ಹೀರೋಯಿನ್ ಎಂದಾಗ ಯಾರೀಕೆ ಎಂದು ಹುಬ್ಬೇರಿಸಿದ್ದವರಿಗೆ ಕಡಿಮೆಯೇನೂ ಇರಲಿಲ್ಲ. ಆಮೇಲೆ ಆಕೆ ನಮ್ ಭದ್ರಾವತಿ ಹುಡುಗಿ ಎಂದಾಗ ಓಹೋ ಎಂದು ಉದ್ಘಾರ ತೆಗೆದಿದ್ದರು. ಆಶಾ ಭಟ್ ಹುಟ್ಟಿದ್ದು, ಬೆಳೆದಿದ್ದು, ಪಿಯುವರೆಗೆ ಓದಿದ್ದು ಭದ್ರಾವತಿ ಮತ್ತು ಮೂಡಬಿದರೆಯಲ್ಲಿ. ಅಕ್ಕ ಡಾಕ್ಟರ್ ಆದರೆ, ಆಶಾ ಭಟ್ ಎಂಜಿನಿಯರ್ ಪದವೀಧರೆ. ಅಷ್ಟೇ ಅಲ್ಲ..
ಆಶಾ ಭಟ್, ಎನ್ಸಿಸಿಯಲ್ಲಿ ಕೆಡೆಟ್ ಆಗಿದ್ದವರು. ಗಣರಾಜ್ಯೋತ್ಸವ ಪರೇಡ್ನಲ್ಲೂ ಭಾಗವಹಿಸಿದ್ದ ದಿಟ್ಟ ಹುಡುಗಿ.ಎನ್ಸಿಸಿ ಕೆಡೆಟ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿದ ಖ್ಯಾತಿ ಇವರದ್ದು. ಸಾರ್ಕ್ ರಾಷ್ಟ್ರಗಳ ಕೆಡೆಟ್ ನಿಯೋಗದಲ್ಲಿ ಅವರು ಶ್ರೀಲಂಕಾ ಮಿಲಿಟರಿ ಅಕಾಡೆಮಿಗೂ ಭೇಟಿ ಕೊಟ್ಟವರು. 2009ರಲ್ಲಿ ಆಲ್ರೌಂಡರ್ ಪ್ರಶಸ್ತಿಯನ್ನೂ ಗೆದ್ದಿರುವ ಹುಡುಗಿ ಆಶಾ ಭಟ್.
ಅದಾದ ಮೇಲೆ ಹೊರಳಿದ್ದು ಮಾಡೆಲಿಂಗ್ ಕ್ಷೇತ್ರದತ್ತ. 2014ರಲ್ಲಿ ಟೈಮ್ಸ್ ಗ್ರೂಪ್ನ ಮಿಸ್ ದಿವಾ ಸ್ಪರ್ಧೆಯಲ್ಲಿ ಗೆದ್ದ ಆಶಾ, ಮಿಸ್ ಇಂಡಿಯಾ ಸುಪ್ರಾ ನ್ಯಾಷನಲ್ ಅವಾರ್ಡ್ನ್ನೂ ಗೆದ್ದರು. ಬೆಸ್ಟ್ ಇನ್ ಟ್ಯಾಲೆಂಟ್ ಅವಾರ್ಡ್ನ್ನೂ ಗೆದ್ದರು. ಯಮಾಹಾ, ಕ್ಲೋಸ್ ಅಪ್, ಕಲ್ಯಾಣ್ ಜ್ಯುವೆಲ್ಲರ್ಸ್ ಸೇರಿದಂತೆ ಹಲವು ಸಂಸ್ಥೆಗಳ ಜಾಹೀರಾತುನಲ್ಲೂ ನಟಿಸಿರುವ ಆಶಾ ಭಟ್, ಹಿಂದಿಯಲ್ಲಿ ಜಂಗ್ಲಿ, ದೋಸ್ತನಾ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ರಾಬರ್ಟ್ ಚಿತ್ರದ ಮೂಲಕ ಹೀರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.