ದರ್ಶನ್ ಜೊತೆ ಶಾಸ್ತ್ರಿ, ಶ್ರೀಮುರಳಿ ಜೊತೆ ಶಂಭು, ವಿಷ್ಣುವರ್ಧನ್ ಜೊತೆ ವರ್ಷ.. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ನಟಿ ಮಾನ್ಯ, ಈಗ ಪಾಶ್ರ್ವವಾಯುಗೆ ತುತ್ತಾಗಿದ್ದಾರೆ. 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮಾನ್ಯ, ಈಗ ಕಾರ್ಪೊರೇಟ್ ಕಂಪೆನಿಯೊಂದರಲ್ಲಿದ್ದಾರೆ. ಸಂಪಾದನೆ ದಕ್ಷಿಣ ಭಾರತದ ಟಾಪ್ ನಟಿಯರಿಗಿಂತ ಹೆಚ್ಚು. ಪತಿ ಮತ್ತು ಮಗಳೊಂದಿಗೆ ಅಮೆರಿಕಾದಲ್ಲಿರೋ ಮಾನ್ಯಗೆ ಕಳೆದ ತಿಂಗಳು ಚಿಕ್ಕದೊಂದು ಆಕ್ಸಿಡೆಂಟ್ ಆಯ್ತು.
ಅದಾದ ಮೇಲೆ ಶುರುವಾಗಿದ್ದು ಬೆನ್ನುಹುರಿಯಲ್ಲಿ ವಿಪರೀತ ನೋವು. ಎಡಗಾಲು, ಎಡಗೈ ಕಂಟ್ರೋಲ್ಗೇ ಸಿಗಲಿಲ್ಲ. ಆಗ ವೈದ್ಯರು ನೇರವಾಗಿ ಬೆನ್ನುಹುರಿಗೇ ಇಂಜೆಕ್ಷನ್ ಕೊಟ್ಟರು. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರಂತೆ ಮಾನ್ಯ.
3 ವಾರಗಳಿಂದ ನನಗೆ ಕೂರೋಕೂ ಆಗ್ತಿಲ್ಲ. ನಿಲ್ಲೋಕೂ ಆಗ್ತಿಲ್ಲ. ಮಲಗೋಕೂ ಆಗ್ತಿಲ್ಲ. ಒಂಥರಾ ವಿಚಿತ್ರ ಸಂಕಟ. ಆದರೆ, ಚೇತರಿಸಿಕೊಳ್ಳುತ್ತಿದ್ದೇನೆ. ಈ ಬದುಕು ನೀಡಿದ ದೇವರಿಗೆ ನಾನು ಚಿರಋಣಿ. ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ನನಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ ನಟಿ ಮಾನ್ಯ.
ಕೊರೊನಾ ಕಾರಣ, ಹೊರಗಿನವರು ಮಾನ್ಯ ಅವರನ್ನು ನೋಡೋಕೂ ಬರುವಂತಿಲ್ಲ. ಹೀಗಾಗಿ ಮಾನ್ಯ ಆಸ್ಪತ್ರೆಯಲ್ಲಿ ಏಕಾಂಗಿ. ನೋವು ಹೇಗಿದೆಯೆಂದರೆ, ಮಾನ್ಯ ಅವರು ತಮ್ಮ ಬೆರಳುಗಳನ್ನು ಕ್ರಾಸ್ ಆಗಿಹಿಡಿಯೋಕೂ ಆಗುತ್ತಿಲ್ಲ. ನೋವು. ಹೆಬ್ಬೆರಳನ್ನು ಮೇಲೆತ್ತಿ ಪಾಸಿಟಿವ್ ಆಗಿದ್ದೇನೆ ಅನ್ನೋಕೂ ಆಗ್ತಿಲ್ಲ. ನೋವು. ಅಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ನೋವು ಹೇಳಿಕೊಂಡಿದ್ದಾರೆ ಮಾನ್ಯ.