ರಶ್ಮಿಕಾ ಮಂದಣ್ಣ, ಕನ್ನಡ ಮತ್ತು ಕನ್ನಡ ಸಿನಿಮಾಗಳಿಂದ ದೂರ ಇದ್ದಾರೆ ಅನ್ನೋದು ಗುಟ್ಟೇನಲ್ಲ. ಕನ್ನಡದ ಅಭಿಮಾನಿಗಳು ಏನೇ ಹಾರಾಡಿ ಕೂಗಾಡಿದರೂ.. ರಶ್ಮಿಕಾ ಮಂದಣ್ಣ ನೋಡಲಿಲ್ಲ.. ಕೇಳಲಿಲ್ಲ.. ಗೊತ್ತೇ ಆಗಲಿಲ್ಲ ಎಂಬಂತೆ ಇದ್ದು ಬಿಡ್ತಾರೆ. ಆದರೆ.. ಒಪ್ಪಿಕೊಂಡ ಸಿನಿಮಾದಲ್ಲಿ ಅವರು ಇದೇ ಕೆಲಸ ಮಾಡಲ್ಲ ಅನ್ನೋ ನಿರೀಕ್ಷೆಯೂ ಹುಸಿಯಾಗಿದೆ.
ರಶ್ಮಿಕಾ ಮಂದಣ್ಣ ನಟಿಸಿರುವ ಕನ್ನಡ ಸಿನಿಮಾ ಪೊಗರು. ಇದನ್ನು ಬಿಟ್ಟರೆ ರಶ್ಮಿಕಾ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಪೊಗರು ರಿಲೀಸ್ ಆಗುವ ಹೊತ್ತಿಗೆ ರಶ್ಮಿಕಾ ತೆಲುಗು, ತಮಿಳು ಸ್ಟಾರ್ ನಟಿಯಾಗಿಬಿಟ್ಟರು. ಪ್ರಾಬ್ಲಂ ಆಗಿದ್ದೇ ಇಲ್ಲಿ.
ತೆಲುಗು, ತಮಿಳು ಚಿತ್ರಗಳ ಪುಟ್ಟ ಪುಟ್ಟ ಸುದ್ದಿಗಳನ್ನೂ ಖುಷಿ ಖುಷಿಯಾಗಿ ಹಂಚಿಕೊಳ್ಳುವ ರಶ್ಮಿಕಾ ಮಂದಣ್ಣ, ಕನ್ನಡದ ಪೊಗರು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದರೂ ಅದನ್ನು ಹೇಳುವ, ಪ್ರಚಾರ ಮಾಡುವ ಕೆಲಸಕ್ಕೆ ಮುಂದಾಗುತ್ತಿಲ್ಲ. ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಪೇಜುಗಳಲ್ಲಿ ಪೊಗರು ಚಿತ್ರದ ಸಣ್ಣ ಅಪ್‍ಡೇಟ್ ಕೂಡಾ ಸಿಕ್ಕಲ್ಲ. ಹೀಗ್ಯಾಕೆ..?
ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಹಿಟ್ ಆದ ಮೇಲೆ ಕನ್ನಡವನ್ನು ಮರೆತಿದ್ದಾರೆ. ತೆಲುಗಿನ ಚೂಟು ಸ್ಟಾರ್‍ಗಳಿಗೆಲ್ಲ ವಿಷ್ ಮಾಡೋ ರಶ್ಮಿಕಾ, ಕನ್ನಡದ ಯಾವೊಬ್ಬ ಕಲಾವಿದರ ಹುಟ್ಟುಹಬ್ಬವನ್ನೂ ನೆನಪಿಸಿಕೊಳ್ಳಲ್ಲ. ಆಕೆಯ ಕಣ್ಣಿಗೆ ಕನ್ನಡ ಮತ್ತು ಕನ್ನಡ ಚಿತ್ರರಂಗ ಈಗ ಯಕಶ್ಚಿತ್ ಆಗಿಬಿಟ್ಟಿದೆ.. ಎಂದೆಲ್ಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಟ್.. ರಶ್ಮಿಕಾ ಮಂದಣ್ಣ ಈ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಲ್ಲ. ಡೋಂಟ್ ಕೇರ್ ಆಟಿಟ್ಯೂಡ್. ಅಭಿಮಾನಿಗಳು ರೊಚ್ಚಿಗೇಳುತ್ತಲೇ ಇದ್ದಾರೆ.