ಹಿರಿಯ ನಟ, ಲೀಲಾವತಿ ಪುತ್ರರೂ ಆಗಿರುವ ವಿನೋದ್ ರಾಜ್ ಅವರಿಗೆ ಈಗ ಹೊಸ ಕಿರುಕುಳ ಶುರುವಾಗಿದೆ. ಸಿನಿಮಾ ರಂಗದಿಂದ ದೂರವೇ ಉಳಿದಿರುವ ವಿನೋದ್ ಅವರಿಗೆ ಈಗ ಶುರುವಾಗಿರುವ ಕಾಟ ಸಣ್ಣದೇನಲ್ಲ. ಅದೆಲ್ಲವನ್ನೂ ಮಾಡ್ತಿರೋದು ಯಾರು ಅನ್ನೋದು ಗೊತ್ತಿಲ್ಲ. ಆಗಿರುವುದು ಇಷ್ಟು.
ನಟ ವಿನೋದ್ ರಾಜ್ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್ ಓಪನ್ ಆಗಿದೆ. ಆ ಖಾತೆಯಿಂದ ಚಿತ್ರರಂಗದ ನಟ, ನಟಿ, ತಂತ್ರಜ್ಞರಿಗೆ ಮೆಸೇಜ್ ಹೋಗ್ತಾ ಇದೆ. ಹಣಕಾಸಿನ ನೆರವು ಕೊಡಿ ಎಂದು ಕೇಳಲಾಗ್ತಾ ಇದೆ. ಆದರೆ, ಇದ್ಯಾವುದೂ ವಿನೋದ್ ರಾಜ್ ಅವರಿಗೇ ಗೊತ್ತಿಲ್ಲ. ಹೀಗಾಗಿ ವಿನೋದ್ ರಾಜ್, ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಎಲ್ಲವನ್ನೂ ಬಿಟ್ಟು ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ. ಹೊಲ, ತೋಟ, ಆಸ್ಪತ್ರೆ ಬಿಟ್ಟು ಎಲ್ಲೂ ಹೋಗುತ್ತಿಲ್ಲ. ನನಗೆ ಸೋಷಿಯಲ್ ಮೀಡಿಯಾ ಗೊತ್ತಿಲ್ಲ. ಸಾಕಷ್ಟು ನೊಂದಿದ್ದೇವೆ. ದಯವಿಟ್ಟು ಇನ್ನಷ್ಟು ನೋಯಿಸಬೇಡಿ ಅನ್ನೋದು ವಿನೋದ್ ರಾಜ್ ಮಾತು.