` ಕನ್ನಡಿಗರು ಹೆಮ್ಮೆ ಪಡುವ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ವಿಜಯ್ ರೆಡ್ಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕನ್ನಡಿಗರು ಹೆಮ್ಮೆ ಪಡುವ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ವಿಜಯ್
Director Vijay Reddy

ಹಿರಿಯ ನಿರ್ದೇಶಕ ವಿಜಯ್ ರೆಡ್ಡಿ ನಿಧನ ಎಂಬ ಸುದ್ದಿ ಕಿವಿಗೆ ಬಿದ್ದಾಗ ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿ ಒಂದು ಬೇಸರ ಮೂಡಿದ್ದರೆ ಅಚ್ಚರಿಯೇನಲ್ಲ. ಏಕೆಂದರೆ ವಿಜಯ್ ರೆಡ್ಡಿ ಮೂಲತಃ ಕನ್ನಡಿಗರಲ್ಲ. ತೆಲುಗಿನವರು. ಆದರೆ ಕ್ಲಾಸಿಕ್ ಚಿತ್ರಗಳನ್ನು ಕೊಟ್ಟಿದ್ದು ಕನ್ನಡದಲ್ಲಿ. ಅವರ ಒಂದೊಂದು ಚಿತ್ರವೂ ಕನ್ನಡಿಗರ ಹೆಮ್ಮೆ. ಅವರು ಕೊಟ್ಟಿದ್ದು ಕನ್ನಡಿಗರು ಅಭಿಮಾನದಿಂದ ಎದೆಯುಬ್ಬಸಿ ಹೇಳಿಕೊಳ್ಳುವಂತಾ ಚಿತ್ರಗಳನ್ನ. ಸುಮ್ಮನೆ ನೋಡಿಬಿಡಿ..

ಗಂಧದ ಗುಡಿ : ಇದು ಡಾ.ರಾಜ್ ಮತ್ತು ವಿಷ್ಣುವರ್ಧನ್ ಎಂಬ ಎರಡು ನಕ್ಷತ್ರಗಳು ಒಟ್ಟಿಗೇ ನಟಿಸಿದ ಏಕೈಕ ಚಿತ್ರ. ಕಾಡು ಸಂರಕ್ಷಣೆ ಬಗ್ಗೆ ಅದ್ಭುತ ಸಂದೇಶ ಇರುವ ಈ ಚಿತ್ರದ ನಾವಾಡುವ ನುಡಿಯೇ ಕನ್ನಡ ನುಡಿ.. ಕನ್ನಡಿಗರು ಮರೆಯಲಾಗದ ಅದ್ಭುತ ಗೀತೆ.

ಮಯೂರ : ಕನ್ನಡ ನಾಡಿನ ಮೊತ್ತಮೊದಲ ದೊರೆ ಮಯೂರವರ್ಮನ ಕಥೆ. ಈ ಚಿತ್ರದ ಒಂದೊಂದು ದೃಶ್ಯ, ಸಂಭಾಷಣೆಯೂ ಕನ್ನಡ ಚಿತ್ರ ಪ್ರೇಮಿಗಳ ಹೃದಯದಲ್ಲಿದೆ.

ಭಕ್ತ ಪ್ರಹ್ಲಾದ : ಅಣ್ಣಾವ್ರು ಖಳನಾಯಕನ ಪಾತ್ರದಲ್ಲಿ ನಟಿಸಿರುವ ಚಿತ್ರ. ರಾಜ್ ಅವರ ಸೌಮ್ಯ ಅಭಿನಯ ನೋಡಿದವರಿಗೆ ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪುವಿನ ರಾಕ್ಷಸಾವತಾರ ಬೆರಗು ಹುಟ್ಟಿಸುವುದು ಸುಳ್ಳಲ್ಲ. ಇದೇ ಚಿತ್ರದಲ್ಲಿ ಮಾಸ್ಟರ್ ಲೋಹಿತ್ (ಪವರ್ ಸ್ಟಾರ್ ಪುನೀತ್) ಅದ್ಭುತ ಅಭಿನಯ ನೀಡಿದ್ದಾರೆ.

ಶ್ರೀನಿವಾಸ ಕಲ್ಯಾಣ : ತಿರುಪತಿ ತಿಮ್ಮಪ್ಪನ ಭಕ್ತರು ಈ ಚಿತ್ರವನ್ನು ಟಿವಿಯಲ್ಲಿ ನೋಡಿದರೂ ಕೈ ಮುಗಿಯುತ್ತಾರೆ. ಡಾ.ರಾಜ್ ಸಾಕ್ಷಾತ್ ನಾರಾಯಣನೇ ಆಗಿ ಕಂಗೊಳಿಸಿರುವ ಚಿತ್ರ.

ನಾ ನಿನ್ನ ಮರೆಯಲಾರೆ : ಕನ್ನಡದಲ್ಲಿ ಲವ್ ಸ್ಟೋರಿಗಳಿಗೆ ನಾಂದಿ ಹಾಡಿದ ಸಿನಿಮಾ. ಇದೊಂದು ಸಿನಿಮಾ ಕಥೆಯನ್ನು ಅಲ್ಲಲ್ಲಿ ಇಷ್ಟಿಷ್ಟು ಬದಲಾಯಿಸಿ ಅದೆಷ್ಟು ಚಿತ್ರಗಳು ಬಂದವೋ ಲೆಕ್ಕವಿಲ್ಲ.

ಸನಾದಿ ಅಪ್ಪಣ್ಣ : ಡಾ.ರಾಜ್ ಅಭಿನಯದ ಹಲವು ಕ್ಲಾಸಿಕ್‍ಗಳಲ್ಲಿ ಸನಾದಿ ಅಪ್ಪಣ್ಣ ಚಿತ್ರವೂ ಒಂದು.ಡಾ.ರಾಜ್, ಜಯಪ್ರದಾ ಜುಗಲ್‍ಬಂದಿ ಅದ್ಭುತವಾಗಿ ಕಾಣಿಸುವುದಷ್ಟೇ ಅಲ್ಲ, ಇದೊಂದು ಅಮರ ಪ್ರೇಮಕಥಾ ಚಿತ್ರವೂ ಹೌದು. ಉಸ್ತಾದ್ ಬಿಸ್ಮಿಲ್ಲಾ ಖಾನ್ ಷಹನಾಯ್ ನುಡಿಸಿರುವ ಏಕೈಕ ಸಿನಿಮಾ ಸನಾದಿ ಅಪ್ಪಣ್ಣ.

ಹುಲಿಯ ಹಾಲಿನ ಮೇವು : ಕೊಡವರ ಸಂಸ್ಕøತಿ, ವೀರಕಥೆಗಳನ್ನು ಅದ್ಭುತವಾಗಿ ತೆರೆಗೆ ತಂದ ಸಿನಿಮಾ. ಜಾನಪದ ಕಥೆಯನ್ನು ಇಷ್ಟು ಚೆಂದವಾಗಿ ತೆರೆಯ ಮೇಲೆ ತರಬಹುದು ಎಂದು ತೋರಿಸಿಕೊಟ್ಟ ಸಿನಿಮಾ.

ಆಟೋ ರಾಜ : ಶಂಕರ್ ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಇದೊಂದು ಚಿತ್ರದಿಂದ ಇವತ್ತಿಗೂ ಶಂಕರ್‍ನಾಗ್ ಅಟೋ ಡ್ರೈವರುಗಳ ಪಾಲಿನ ಸೂಪರ್ ಸ್ಟಾರ್.

ನಾ ನಿನ್ನ ಬಿಡಲಾರೆ : ಒಂದು ಹಾರರ್ ಸಿನಿಮಾ, ಅದು ರಿಲೀಸ್ ಆದ 40 ವರ್ಷಗಳ ನಂತರವೂ ಪ್ರೇಕ್ಷಕರನ್ನು ಹೆದರಿಸುತ್ತೆ ಎಂದರೆ ಅದರ ಕ್ರೆಡಿಟ್ಟು, ಅನಂತ್ ನಾಗ್, ಲಕ್ಷ್ಮೀಗಷ್ಟೇ ಅಲ್ಲ, ನಿರ್ದೇಶಕ ವಿಜಯ್ ಅವರಿಗೂ ಸಲ್ಲಬೇಕು.

ಮೋಜುಗಾರ ಸೊಗಸುಗಾ : ವಿಷ್ಣುವರ್ಧನ್ ಅಭಿನಯದ 150ನೇ ಸಿನಿಮಾ.

ಇವಷ್ಟೇ ಅಲ್ಲ, ಗಂಧದ ಗುಡಿ ಭಾಗ 2, ಬಡವರ ಬಂಧು, ಶಿವ ಮೆಚ್ಚಿದ ಕಣ್ಣಪ್ಪ, ನೀ ನನ್ನ ಗೆಲ್ಲಲಾರೆ, ಮುಳ್ಳಿನ ಗುಲಾಬಿ, ಖದೀಮ ಕಳ್ಳರು, ಹುಲಿ ಹೆಬ್ಬುಲಿ, ದೇವಾ.. ಹೀಗೆ ಒಂದಲ್ಲ..ಎರಡಲ್ಲ.. 48 ಚಿತ್ರಗಳು.

ಇಂತಹ ವಿಜಯ್ ರೆಡ್ಡಿ ಇನ್ನಿಲ್ಲ ಎಂಬುದೇ ಕನ್ನಡಿಗರು ಬೇಸರಿಸಿಕೊಳ್ಳುವ ಸಂಗತಿ. ವಿಜಯ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಈಗ ಚೆನ್ನೈನಲ್ಲಿದ್ದ ವಿಜಯ್ ರೆಡ್ಡಿ ಅವರಿಗೆ ಬಹು ಅಂಗಾಂಗ ವೈಫಲ್ಯ ಕಾಡುತ್ತಿತ್ತು. ವಿಜಯ್ ಅವರು ಇಲ್ಲದಿದ್ದರೂ, ಅವರ ಚಿತ್ರಗಳು ಮಾತ್ರ ಕರ್ನಾಟಕ, ಕನನ್ನಡ ಇರುವವರೆಗೂ ಅಜರಾಮರ.