` ಇದಕ್ಕಿಂತ ದೊಡ್ಡ ದುರಂತವನ್ನು ನನ್ನ ಜೀವನದಲ್ಲಿ ನೋಡಲಾರೆ - ಹಂಸಲೇಖ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Hamsalekha's Expresses Extreme Grief Over SPB's Death
Hamsalekha, SP Balasumbramanyam

ಹಂಸಲೇಖ ಮತ್ತು ಎಸ್‍ಪಿಬಿ ಅವರದ್ದು ಜುಗಲ್‍ಬಂದಿ ಜೀವನ. ಹಂಸಲೇಖರ ಶ್ರೇಷ್ಟ ಗೀತೆಗಳಿಗೆ ಜೀವ ತುಂಬಿದವರು ಇದೇ ಎಸ್‍ಪಿಬಿ. ಹಂಸಲೇಖ ಅವರಿಗೆ ಕನ್ನಡದಲ್ಲಿ ರಾಷ್ಟ್ರಪ್ರಶಸ್ತಿ ಪಡೆಯಬೇಕು. ಆ ಪ್ರಶಸ್ತಿ ಸಮಾರಂಭಕ್ಕೆ ರಫಿ ಅವರು ಧರಿಸುತ್ತಿದ್ದಂತ ಕೋಟು ಧರಿಸಿ ಹೋಗಿ ಪ್ರಶಸ್ತಿ ಸ್ವೀಕರಿಸಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡಿದವರು ಹಂಸಲೇಖ.

ಗಾನಯೋಗಿ ಪಂಚಕ್ಷರಿ ಗವಾಯಿ ಚಿತ್ರಕ್ಕೆ ಎಸ್‍ಪಿಬಿ ರಾಷ್ಟ್ರಪ್ರಶಸ್ತಿ ಪಡೆದರು. ಆ ದಿನ ಹೇಳಿದಂತೆಯೇ ರಫಿ ಧರಿಸುತ್ತಿದ್ದ ಮಾದರಿಯ ಕೋಟನ್ನೇ ಧರಿಸಿದ್ದರು. ಆರಂಭದಲ್ಲಿ ಅಷ್ಟು ದೊಡ್ಡ ಸಾಧಕನ ಹಾಡುಗಳನ್ನು ಹಾಡುವ ಶಕ್ತಿ ನನ್ನಲ್ಲಿ ಇಲ್ಲ ಎಂದಿದ್ದರಂತೆ ಎಸ್‍ಪಿಬಿ. ಸತತ 6 ತಿಂಗಳ ಪ್ರಯತ್ನದ ನಂತರವೂ ಎಸ್‍ಪಿಬಿ ಒಪ್ಪದೇ ಹೋದಾಗ ಹರಿಹರನ್ ಅವರಿಂದ ಹಾಡಿಸೋಣ ಎಂದುಕೊಂಡು ನಿರ್ಮಾಪಕರ ಬಳಿ ಹೇಳಿದ್ದರಂತೆ ಹಂಸಲೇಖ.

ನಿರ್ಮಾಪಕ ಬಂಗಾರೇಶ್ ಅವರು ಹರಿಹರಾನ ಕರ್ಕೊಂಡ್ ಬರ್ತೀರೋ.. ದಾವಣಗೆರೆಯನ್ನೇ ಕರ್ಕೊಂಡ್ ಬರ್ತೀರೋ ಗೊತ್ತಿಲ್ಲ. ಈ ಚಿತ್ರದಲ್ಲಿ ಎಸ್‍ಪಿಬಿ ಅವರು ಹಾಡಲೇಬೇಕು. ಅವರನ್ನು ಹೇಗಾದರೂ ಮಾಡಿ ಒಪ್ಪಿಸುವ ಜವಾಬ್ದಾರಿ ನಿಮ್ಮದು ಎಂದರಂತೆ. ಮತ್ತೊಮ್ಮೆ ಎಸ್‍ಪಿಬಿ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದಾಗ ಎಸ್‍ಪಿಬಿ, ಹಂಸಲೇಖ ಅವರಿಗೆ ಹಾಡುಗಳನ್ನು ಕೇಳಿಸಿದರಂತೆ.

ಹಂಸಲೇಖ ಗವಾಯಿಗಳ ಚಿತ್ರಕ್ಕೆ ಸಂಯೋಜಿಸಿ ಕಳಿಸಿದ್ದ ಅಷ್ಟೂ ಹಾಡುಗಳನ್ನು 50 ಬಾರಿ ಹಾಡಿ ರೆಕಾರ್ಡ್ ಮಾಡಿದ್ದರಂತೆ ಎಸ್‍ಪಿಬಿ. ಕೊನೆಗೆ ಹಂಸಲೇಖ ಅವರನ್ನು ಸ್ಟುಡಿಯೋದಲ್ಲಿ ನೀವು ಇರಬಾರದು. ನೀವೇನಾದರೂ ದೋಷಗಳನ್ನು ಎತ್ತಿ ತೋರಿಸಿದರೆ ನನಗೆ ಕಷ್ಟವಾಗುತ್ತೆ. ಹಾಡು ಮುಗಿದ ನಂತರವೇ ನಿಮ್ಮ ಅಭಿಪ್ರಾಯ ಹೇಳಿ ಎಂದು ರೆಕಾರ್ಡಿಂಗ್ ಸ್ಟುಡಿಯೋಗೂ ಬಿಟ್ಟುಕೊಂಡಿರಲಿಲ್ಲವಂತೆ ಎಸ್‍ಪಿಬಿ. ಅವರಿಬ್ಬರ ಪ್ರೀತಿ, ಬಾಂಧವ್ಯ ಹಾಗಿತ್ತು.

ನಾನು ಸ್ವಾತಂತ್ರ್ಯ ಚಳವಳಿ ಕಂಡವನಲ್ಲ. ಗಾಂಧಿಯನ್ನು ನೋಡಿದವನಲ್ಲ. ಆದರೆ ಜೆಪಿ ಚಳವಳಿ ನೋಡಿದವನು. ಮಹಾಯುದ್ಧಗಳನ್ನು ನೋಡಿದವನಲ್ಲ. ಆದರೆ ಈಗ ಬಂದಿರೋ ಕೊರೊನಾ ಮಹಾಯುದ್ಧಕ್ಕಿಂತ ಭೀಕರವಾಗಿದೆ. ನಾನು ನನ್ನ ಈ ಜನ್ಮದಲ್ಲಿ ನೋಡಬಾರದು ಎಂದುಕೊಂಡಿದ್ದುದು ಎಸ್‍ಪಿಬಿ ನಿಧನ. ಅದನ್ನೂ ನೋಡಿಬಿಟ್ಟೆ. ಇದಕ್ಕಿಂತ ದೊಡ್ಡ ದುರಂತವನ್ನು ನಾನು ನೋಡೋಕೆ ಸಾಧ್ಯವಿಲ್ಲ ಎಂದಿದ್ದಾರೆ ಹಂಸ.