ಕಸ್ತೂರಿ ನಿವಾಸ. ಡಾ.ರಾಜ್ ಅಭಿನಯದ ಹಲವಾರು ಕ್ಲಾಸಿಕ್ ಚಿತ್ರಗಳಲ್ಲಿ ಇದೂ ಒಂದು. ಈಗ ಈ ಚಿತ್ರದ ಟೈಟಲ್‍ನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಿಟಿದ್ದರು ನಿರ್ದೇಶಕ ದಿನೇಶ್ ಬಾಬು. ನಾಯಕಿಯಾಗಿದ್ದವರು ರಚಿತಾ ರಾಮ್. ಚಿತ್ರ ಸೆಟ್ಟೇರಿಯೂ ಆಗಿತ್ತು. ಇದು ದಿನೇಶ್ ಬಾಬು ಅವರ 50ನೇ ಸಿನಿಮಾ ಎನ್ನುವುದು ವಿಶೇಷ.
ಆದರೆ ಅಣ್ಣಾವ್ರ ಮಾಸ್ಟರ್ ಪೀಸ್ ಚಿತ್ರದ ಟೈಟಲ್ ಬೇಡ. ಅದನ್ನು ಬಿಟ್ಟು ಬಿಡಿ ಎಂದು ರಾಜ್ ಅಭಿಮಾನಿಗಳು ದಿನೇಶ್ ಬಾಬು ಅವರಿಗೆ ಮನವಿ ಮಾಡಿದ್ದರು.
ದಿನೇಶ್ ಬಾಬು ಅವರಿಗೂ ಅಷ್ಟೆ, ಡಾ.ರಾಜ್ ಎಂದರೆ ಅಪಾರ ಗೌರವ. ಈ ಗೌರವದಿಂದಾಗಿಯೇ ಟೈಟಲ್ ಇಟ್ಟಿದ್ದ ದಿನೇಶ್ ಬಾಬು, ಕೊನೆಗೆ ಅಭಿಮಾನಿಗಳ ಮನವಿಗೆ ಮಣಿದಿದ್ದಾರೆ. ಮುಹೂರ್ತವಾದ ಒಂದೇ ದಿನಕ್ಕೆ ಚಿತ್ರದ ಟೈಟಲ್ ಕೈಬಿಡಲು ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಕಸ್ತೂರಿ ನಿವಾಸ ಅನ್ನೋ ಟೈಟಲ್ಲಿಗೆ ಬದಲು ಕಸ್ತೂರಿ ಎಂದಷ್ಟೇ ಟೈಟಲ್ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.