ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೀಗ ಇನ್ನೊಂದು ವಿವಾದ ಸುತ್ತಿಕೊಂಡಿದೆ. ಕೆಲವು ತಿಂಗಳ ಹಿಂದೆ ಕೆಜಿಎಫ್ 2ನಿಂದ ಅನಂತ್ ನಾಗ್ ಹೊರನಡೆದಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅದು ಹೆಚ್ಚೂ ಕಡಿಮೆ ಅಧಿಕೃತವಾಗಿದೆ. ಅನಂತ್ ನಾಗ್ ನಟಿಸಿದ್ದ ಪಾತ್ರಕ್ಕೆ ಪ್ರಕಾಶ್ ರೈ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
ಅನಂತ್ ನಾಗ್ ಪಾತ್ರವೂ ಇರುತ್ತೆ, ಪ್ರಕಾಶ್ ರೈ ಪಾತ್ರ ಹೊಸದು ಎಂದು ಚಿತ್ರತಂಡ ಹೇಳುತ್ತಿದೆಯಾದರೂ, ಅನಂತ್ ನಾಗ್ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ನಾನು ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸುತ್ತಿಲ್ಲ ಎಂದು. ಹೀಗಾಗಿ ಗೊಂದಲಗಳ ನಡುವೆಯೇ ಒಂದು ಸ್ಪಷ್ಟನೆ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಇರಲ್ಲ.
ಇದರ ಜೊತೆಗೆ ಪ್ರಕಾಶ್ ರೈ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಲಪಂತೀಯರು ಕೆಜಿಎಫ್ ಚಾಪ್ಟರ್ 2 ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದಾರೆ. ಎಡಪಂತೀಯ ವಿಚಾರಧಾರೆಯ ಪ್ರಕಾಶ್ ರೈ, ಮೋದಿ ಮತ್ತು ಬಿಜೆಪಿಯ ಪ್ರಬಲ ವಿರೋಧಿ. ಇದರಿಂದ ಮೋದಿ ಮತ್ತು ಬಿಜೆಪಿ ಪರವಾದಿಗಳ ಕೆಂಗಣ್ಣಿಗೆ ಗುರಿಯಾಗಿರೋ ಪ್ರಕಾಶ್ ರೈ ಮೇಲಿನ ಸಿಟ್ಟು, ಈಗ ಕೆಜಿಎಫ್ ಚಾಪ್ಟರ್ 2 ವಿರುದ್ಧ ತಿರುಗುತ್ತಿದೆ. ವಿಶೇಷವೆಂದರೆ ಪ್ರಕಾಶ್ ರೈ ಎದುರು ನಟಿಸುತ್ತಿರೋದು ವಿಚಾರಧಾರೆಯಲ್ಲಿ ರೈಗೆ ತದ್ವಿರುದ್ಧ ದಿಕ್ಕಿನಲ್ಲಿರುವ ಮಾಳವಿಕಾ ಅವಿನಾಶ್.
ಒಟ್ಟಿನಲ್ಲಿ ಈ ವಿವಾದವನ್ನು ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಸಹ ನಿರ್ಮಾಪಕ ಕಾರ್ತಿಕ್ ಗೌಡ, ನಾಯಕ ನಟ ಯಶ್.. ಇವರೆಲ್ಲ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವಂತೂ ಇದೆ.