ಮಹಾತ್ಮಾ ಪಿಕ್ಚರ್ಸ್, ಕನ್ನಡದ ಹೆಮ್ಮೆಯ ಚಿತ್ರ ಸಂಸ್ಥೆ. ಈ ಸಂಸ್ಥೆ ಜನ್ಮತಾಳಿದಾಗ ಕರ್ನಾಟಕವೇ ಇನ್ನೂ ಜನ್ಮ ತಾಳಿರಲಿಲ್ಲ. 1946ರಲ್ಲಿ ನಿರ್ಮಾಣವಾದ ಈ ಸಂಸ್ಥೆ ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಇತಿಹಾಸ ನಿಮಗೆ ಗೊತ್ತೇ ಇದೆ. ಕೃಷ್ಣಲೀಲಾ, ಈ ಸಂಸ್ಥೆಯ ಮೊದಲ ಸಿನಿಮಾ. ಇದೇ ಸಂಸ್ಥೆಯ ಜಗನ್ಮೋಹಿನಿ, ಕನ್ನಡದಲ್ಲಿ ಮೊದಲ 100 ದಿನ ಓಡಿದ ಚಿತ್ರ. ವಿಠ್ಠಲಾಚಾರ್ಯ ಹೆಸರು ಹಲವು ಜನರಿಗೆ ಮರೆತೇ ಹೋಗಿರಬಹುದು. ಆದರೆ ಆಗಿನ ಕಾಲಕ್ಕೇ ಬೆಳ್ಳಿ ತೆರೆಯ ಮೇಲೆ ಮಾಯ, ಮಂತ್ರ, ಮ್ಯಾಜಿಕ್ಕುಗಳನ್ನು ಸೃಷ್ಟಿಸಿ ಜನರನ್ನು ಮೋಡಿ ಮಾಡಿದ್ದ ನಿರ್ದೇಶಕ, ಇದೇ ಮಹಾತ್ಮಾ ಪಿಕ್ಚರ್ಸ್ ಕೊಡುಗೆ. ಈ ಸಂಸ್ಥೆ ಈಗ 75ನೇ ವರ್ಷದ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಇದುವರೆಗೆ 99 ಸಿನಿಮಾ ನಿರ್ಮಿಸಿರುವ ಸಂಸ್ಥೆಯ 100ನೇ ಚಿತ್ರಕ್ಕೆ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಲಾಕ್ ಡೌನ್ ಸಮಯದಲ್ಲಿ ಜೂಲಿಯನ್ ರೀಡ್ ಮೇಯರ್ ಅವರ ಕಿಲ್ಲಿಂಗ್ ಫಾರ್ ಪ್ರಾಫಿಟ್ ಮತ್ತು ಪೆಟ್ರೀಷಿಯಾ ಲೀಶಾರ್ಪ್ ಅವರ ಪೋರ್ಚ್: ಸೀಕಿಂಗ್ ಎ ನ್ಯೂ ಲೈಫ್ ಇನ್ ತಾಂಜೇನಿಯಾ ಎಂಬ ಎರಡು ಕಾದಂಬರಿ ಓದಿದ್ದಾರೆ. ಆ ವೇಳೆ ಒಂದು ಕಥೆ ಹೊಳೆದಿದೆ. ಅದು ಮೆಡಿಸಿನ್ ಮಾಫಿಯಾ ವಿರುದ್ಧ ಐಎಫ್‍ಎಸ್ ಅಧಿಕಾರಿಯೊಬ್ಬ ಹೋರಾಡುವ ಕಥೆ. ನಡೆಯುವುದು ಆಫ್ರಿಕಾದ ಕಾಡಿನಲ್ಲಿ. ದೊಡ್ಡ ಕ್ಯಾನ್ ವಾಸ್ ಚಿತ್ರ. ಕಥೆಯನ್ನು ದರ್ಶನ್‍ಗೆ ಹೇಳಿದ್ದಾರೆ. ಅತ್ತ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸದ್ಯಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ದರ್ಶನ್ ಜೊತೆ ಮದಕರಿ ನಾಯಕ ಚಿತ್ರ ಮಾಡುತ್ತಿದ್ದಾರೆ. ಅಲ್ಲಿಗೆ.. ಈ ಕಥೆ ಸಿನಿಮಾ ಆಗುವುದೇನಿದ್ದರೂ, ಮದಕರಿ ನಾಯಕ ಚಿತ್ರ ಮುಗಿದ ಮೇಲೇನೆ..