ಚಿರಂಜೀವಿ ಸರ್ಜಾ ಫುಲ್ ಬ್ಯುಸಿಯಿದ್ದರು. ಬಹುಶಃ ಲಾಕ್ ಡೌನ್ ಸಮಯದಲ್ಲಿ ಮಾತ್ರವೇ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆದಿದ್ದರು ಎನಿಸುತ್ತದೆ. ಅಷ್ಟರಮಟ್ಟಿಗೆ ಬ್ಯುಸಿಯಿದ್ದರು. ಈ ವರ್ಷವನ್ನೇ ತೆಗೆದುಕೊಂಡರೆ, ಲಾಕ್ ಡೌನ್ ಆಗುವುದಕ್ಕೂ ಮುನ್ನ ಚಿರು ಅಭಿನಯದ 4 ಚಿತ್ರಗಳು ರಿಲೀಸ್ ಆಗಿದ್ದವು. ಸಿಂಗ, ಆದ್ಯ, ಶಿವಾರ್ಜುನ, ಖಾಕಿ ಚಿತ್ರಗಳು ರಿಲೀಸ್ ಆಗಿದ್ದವು. ಇನ್ನೂ ಹಲವು ಚಿತ್ರಗಳು ನಿರ್ಮಾಣದ ವಿವಿಧ ಹಂತದಲ್ಲಿದ್ದವು.
ರಾಜಮಾರ್ತಾಂಡ : ಇದು ರಾಮ್ ನಾರಾಯಣ್ ನಿರ್ದೇಶನದ ಸಿನಿಮಾ. ಚಿತ್ರೀಕರಣ ಮುಗಿದಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಶೇ.90ರಷ್ಟು ಮುಗಿದಿತ್ತು. ಒಂದು ಹಾಡಿನ ಚಿತ್ರೀಕರಣ ಬಾಕಿಯಿತ್ತು. ಈಗ ಆ ಹಾಡು ಇಲ್ಲದೆಯೇ ಸಿನಿಮಾ ರಿಲೀಸ್ ಆಗಬಹುದು.
ಕ್ಷತ್ರಿಯ : ಇದು ಹೊಸ ನಿರ್ದೇಶಕ ಅನಿಲ್ ಮಂಡ್ಯ ನಿರ್ದೇಶನದ ಸಿನಿಮಾ. ರಾಮ್ ನಾರಾಯಣ್ ಅವರಂತೆಯೇ ಇವರಿಗೂ ಅವಕಾಶ ಕೊಡಿಸಿದ್ದವರು ಸ್ವತಃ ಚಿರಂಜೀವಿ ಸರ್ಜಾ. 30 ದಿನಗಳ ಶೂಟಿಂಗ್ ಮುಗಿದಿತ್ತು. ಮುಂದೇನು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.
ಏಪ್ರಿಲ್ : ಹೆಚ್ಚೂ ಕಡಿಮೆ ನಿಂತೇ ಹೋಗಿದ್ದ ಸಿನಿಮಾ ಅದು. ಚಿರುಗೆ ಕಥೆ ಇಷ್ಟವಾಗಿ ಹಾಲಿವುಡ್ ಸ್ಟೈಲ್ನಲ್ಲಿದೆ. ಬ್ರೇಕ್ ಕೊಡುತ್ತೆ. ಮಾಡೋಣ ಎಂದು ತಂಡವನ್ನು ಹುರಿದುಂಬಿಸಿ ಹೊರಟಿದ್ದರು. ರಚಿತಾ ರಾಮ್ ನಾಯಕಿಯಾಗಿದ್ದ ಚಿತ್ರಕ್ಕೆ ಮುಹೂರ್ತವೂ ನೆರವೇರಿತ್ತು. ಚಿರು ಪಾತ್ರದ ಶೂಟಿಂಗ್ ಶುರು ಮಾಡುವ ಹೊತ್ತಿಗೆ ಲಾಕ್ ಡೌನ್ ಬಂತು. ಈಗ ಚಿರು ಜಾಗಕ್ಕೆ ಯಾರು ಸೂಟ್ ಆಗುತ್ತಾರೆ ಎಂದು ನಿರ್ದೇಶಕ ಸತ್ಯ ರಾಯಲ ತಲೆ ಕೆಡಿಸಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಚಿರು ಸ್ಥಾನದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
ಧೀರಂ : ಈ ಚಿತ್ರದ ಕಥೆಯನ್ನು ಲಾಕ್ ಡೌನ್ ಸಮಯದಲ್ಲಿ ಕೇಳಿ ಇಷ್ಟಪಟ್ಟಿದ್ದರು ಚಿರು. ರಮೇಶ್ ಬಾಬು ನಿರ್ದೇಶನದ ಈ ಚಿತ್ರ ನಿಲ್ಲಬಹುದು ಅಥವಾ ಬೇರೊಬ್ಬರೊಂದಿಗೆ ಟೇಕಾಫ್ ಕೂಡಾ ಆಗಬಹುದು.
ರಣಂ : ಇದು ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಒಟ್ಟಿಗೇ ನಟಿಸಿರುವ ಚಿತ್ರ. ಎಲ್ಲವೂ ಸಿದ್ಧವಾಗಿರುವ ಚಿತ್ರ, ಕೆಲವೇ ದಿನಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.