ಕೊರೊನಾ ಕೊಟ್ಟಿರುವ ಶಾಕ್‍ಗೆ ತತ್ತರಿಸಿ ಹೋಗಿರುವ ಚಿತ್ರರಂಗದಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗಿದೆ. ಏಕೆಂದರೆ ಕೊರೊನಾದಿಂದ ಅತೀ ಹೆಚ್ಚು ನಷ್ಟ ಅನುಭವಿಸುವುದು ನಿರ್ಮಾಪಕರು. ನಿರ್ಮಾಪಕರಿಗೆ ಯಾವುದೇ ವಲಯಗಳಲ್ಲಿ ವಿನಾಯಿತಿ ಸಿಕ್ಕಲ್ಲ. ಕಾರ್ಮಿಕರಿಗೆ, ತಂತ್ರಜ್ಞರಿಗೆ ಸಂಭಾವನೆ ಕಡಿಮೆ ಮಾಡೋಕಾಗಲ್ಲ. ಅದು ಮಾನವೀಯತೆ ಅಲ್ಲ. ಇನ್ನು ಪ್ರದರ್ಶಕರ ವಲಯದಲ್ಲಿ ಕೇಳೋಕೆ ಆಗಲ್ಲ. ಅವರದ್ದು ಪಕ್ಕಾ ಬಿಸಿನೆಸ್. ಪ್ರಚಾರದ ವಿಚಾರದಲ್ಲೂ ರಾಜಿಯಾಗೋಕೆ ಆಗಲ್ಲ. ಅದು ಅನಿವಾರ್ಯ. ಇನ್ನು ಸಾಲ ಕೊಟ್ಟವರು ಬಡ್ಡಿ ಕಡಿಮೆ ಮಾಡಲ್ಲ. ಹಾಗೇನಾದ್ರೂ ಕೇಳಿದ್ರೆ ಸಾಲಾನೇ ಹುಟ್ಟಲ್ಲ.
ಸ್ಸೋ.. ಫೈನಲಿ ಉಳಿದುಕೊಂಡಿರೋದು ಒಂದೇ. ಹೀರೋಗಳ ಸಂಭಾವನೆ. ಹೀಗಾಗಿಯೇ ಸ್ಟಾರ್ ನಟರು ಸಂಭಾವನೆ ಕಡಿಮೆ ಮಾಡಿಕೊಳ್ಳಿ ಎಂದು ಮನವಿ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ `ಹೀರೋಗಳ ಸಂಭಾವನೆಯೇ ನಿರ್ಮಾಪಕರಿಗೆ ದೊಡ್ಡ ಭಾರ. ಥಿಯೇಟರಿಗೂ ಲಕ್ಷಗಳ ಲೆಕ್ಕದಲ್ಲಿ ಕಟ್ಟಬೇಕಿದೆ. ಬಂಡವಾಳ ಹೂಡುವ ನಿರ್ಮಾಪಕನ ಜೊತೆ ಈ ಸಂದರ್ಭದಲ್ಲಿ ಕಲಾವಿದರೇ ನಿಲ್ಲಬೇಕು. ಸಂಭಾವನೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಿ' ಎಂದು ಸ್ಟಾರ್ ಕಲಾವಿದರಿಗೆ ಮನವಿ ಮಾಡಿದ್ದಾರೆ.
ಈಗ ಕಲಾವಿದರ ಜೊತೆ ಸಭೆ ನಡೆಸಲು ನಿರ್ಮಾಪಕರ ಸಂಘದವರು ರಾಕ್‍ಲೈನ್ ವೆಂಕಟೇಶ್ ಅವರಿಗೆ ಮನವಿ ಮಾಡಿದ್ದಾರೆ. ಅತ್ತ ರಾಕ್‍ಲೈನ್ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದಾ ನಿರ್ಮಾಪಕರ ಪರವಾಗಿರುವ ಶಿವರಾಜ್ ಕುಮಾರ್ ಜೊತೆ ಮಾತನಾಡೋದಾಗಿ ಹೇಳಿದ್ದಾರೆ.