ಸರ್ವರ್ ಸೋಮಣ್ಣ, ಜಗ್ಗೇಶ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಆರಂಭದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಸಿನಿಮಾ, ಕೊನೆ ಕೊನೆಗೆ ಕಣ್ಣೀರ ಕೋಡಿಯನ್ನೇ ಹರಿಸುತ್ತದೆ. ಆದರೆ ಆ ಚಿತ್ರವನ್ನು ನೋಡೋಕೆ ಜಗ್ಗೇಶ್ ಇಷ್ಟಪಡುವುದಿಲ್ಲವಂತೆ. ಅದಕ್ಕೆ ಅವರದ್ದೇ ಕಾರಣಗಳಿವೆ.
ಆ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ತಾಯಿಯಾಗಿ ನಟಿಸಿದ್ದವರು ಪಂಡರೀಭಾಯಿ. ಚಿತ್ರದಲ್ಲಿ ಮಗ ಯಶಸ್ಸಿನ ಉತ್ತುಂಗದಲ್ಲಿದ್ದಾಗ ತಾಯಿಯನ್ನು ಕಳೆದುಕೊಳ್ತಾನೆ ಸೋಮಣ್ಣ. ವಿಚಿತ್ರವೆಂದರೆ ಅಂಥದ್ದೇ ಅನುಭವ ಜಗ್ಗೇಶ್ ಅವರಿಗೆ ನಿಜ ಜೀವನದಲ್ಲಿಯೂ ಆಗಿ ಹೋಯ್ತು.
ಜಗ್ಗೇಶ್ ಯಶಸ್ಸಿನ ಉತ್ತುಂಗಕ್ಕೇರುವ ಸಂದರ್ಭದಲ್ಲಿಯೇ ಜಗ್ಗೇಶ್ ತಾಯಿಯನ್ನು ಕಳೆದುಕೊಂಡರು. ತಮ್ಮ ಕೋಮಲ್ ಮದುವೆ ನೋಡುವ ಆಸೆ ಎಂದಿದ್ದ ತಾಯಿಯ ಆಸೆಯನ್ನು ಈಡೇರಿಸಿದ್ದರು ಜಗ್ಗೇಶ್. ಆದರೆ ಕೋಮಲ್ ಮದುವೆಯಾದ 20 ದಿನಗಳಲ್ಲಿಯೇ ತಾಯಿ ಮೃತಪಟ್ಟಿದ್ದರಂತೆ. ಆಗ ನಾನು ಪ್ರಭಾಕರ್ ಅವರ ಜೊತೆ ಅರ್ಜುನ್ ಅಭಿಮನ್ಯು ಚಿತ್ರದಲ್ಲಿ ನಟಿಸುತ್ತಿದ್ದೆ ಎಂದು ನೆನಪಿಸಿಕೊಂಡಿರುವ ಜಗ್ಗೇಶ್ ಪಂಡಿರಿಬಾಯಿ ಕೂಡಾ ನನಗೆ ತಾಯಿಯಂತೆಯೇ ಕಾಣಿಸುತ್ತಿದ್ದರು ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಳೆಯ ನೆನಪು ಹಂಚಿಕೊಂಡಿರುವ ಜಗ್ಗೇಶ್ ಇಂತಹ ಕಾರಣಗಳಿಂದಾಗಿಯೇ ನಾನು ಟಿವಿಯಲ್ಲಿ ಸರ್ವರ್ ಸೋಮಣ್ಣ ಚಿತ್ರ ಬರುತ್ತಿದ್ದರೆ ನೊಡೋಲ್ಲ ಎಂದಿದ್ದಾರೆ.