ಕೊರೋನಾ ಕಾಟವೊಂದು ಇಲ್ಲದೇ ಹೋಗಿದ್ದರೆ, ಇಷ್ಟು ಹೊತ್ತಿಗೆ ಕರ್ನಾಟಕದ ತುಂಬೆಲ್ಲ ನಿಖಿಲ್ ಕುಮಾರಸ್ವಾಮಿ ಮದುವೆಯದ್ದೇ ಸುದ್ದಿ ಇರುತ್ತಿತ್ತು. ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮದುವೆ ಸಂಭ್ರಮ, ಶಾಸ್ತ್ರ ಇಷ್ಟು ಹೊತ್ತಿಗೆ ಶುರುವಾಗಿಬಿಡುತ್ತಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಆದರೆ, ಮದುವೆ ನಿಂತಿಲ್ಲ.
ಏ.17ರಂದು ನಿಖಿಲ್ ಮದುವೆ ರೇವತಿ ಅವರ ಜೊತೆ ನೆರವೇರಲಿದೆ. ರಾಮನಗರದಲ್ಲಿರುವ ಅವರ ಫಾರ್ಮ್ ಹೌಸ್ ಅರ್ಥಾತ್ ತೋಟದ ಮನೆಯಲ್ಲಿ ಮದುವೆ ನಡೆಯಲಿದೆ. ಎರಡೂ ಕುಟುಂಬದ ಕಡೆಯ ಆಪ್ತ ಬಂಧುಗಳಷ್ಟೇ ಮದುವೆಯಲ್ಲಿರುತ್ತಾರೆ.
ಲಾಕ್ ಡೌನ್ ನಡುವೆ ಈ ಮದುವೆ ಬೇಕಿತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ. 20ಕ್ಕೂ ಹೆಚ್ಚು ಜನ ಒಂದೆಡೆ ಸೇರುವುದು ಈ ಸಂದರ್ಭದಲ್ಲಿ ನಿಷಿದ್ಧ. ದೊಡ್ಡಗೌಡರ ಕೌಟುಂಬಿಕ ಬಳಗವೇ ದೊಡ್ಡದು. ಒಟ್ಟಿನಲ್ಲಿ ಕುಮಾರಸ್ವಾಮಿಯವರ ಆಸೆಯಂತೆ ಅದ್ಧೂರಿಯಾಗಿ ಮದುವೆ ನಡೆಯುತ್ತಿಲ್ಲ ಎನ್ನುವುದಂತೂ ಸತ್ಯ.
--