ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭಿರವಾಗಿತ್ತು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ವೈಫಲ್ಯ, ಉಸಿರಾಟ ಸಮಸ್ಯೆಯೂ ಸೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ.
2 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಂಡ ನಂತರ ಬುಲೆಟ್ ಪ್ರಕಾಶ್ ಸಣ್ಣಗಾದರಾದರೂ, ಚೇತರಿಸಿಕೊಳ್ಳಲೇ ಇಲ್ಲ. ಭಾರೀ ದೇಹ ಹೊಂದಿದ್ದ ಬುಲೆಟ್ ಪ್ರಕಾಶ್ ಸಣ್ಣಗಾಗಲು ಮಾಡಿಸಿಕೊಂಡ ಬೇರಿಯಾಟ್ರಿಕ್ ಸರ್ಜರಿ, ಅವರ ದೇಹ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತ್ತು.
ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ಬುಲೆಟ್ ಪ್ರಕಾಶ್ ಅವರಿಗೆ 44 ವರ್ಷವಷ್ಟೇ ವಯಸ್ಸು. ಏಪ್ರಿಲ್ 2ರಂದು ಅವರ ಹುಟ್ಟುಹಬ್ಬವಿತ್ತು. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಇನ್ನೂ ಕೆಲವರು ಪ್ರಕಾಶ್ ಹೆಸರಿನ ಕಲಾವಿದರಿದ್ದರು. ಆಗ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸುತ್ತಿದ್ದ ಕಾರಣಕ್ಕೆ, ಬುಲೆಟ್ ಪ್ರಕಾಶ್ ಎಂದೇ ನಾಮಕರಣ ಮಾಡಲಾಯ್ತು. ಶಿವಣ್ಣ, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಿ, ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದ್ದರು ಬುಲೆಟ್ ಪ್ರಕಾಶ್. ದರ್ಶನ್ ಜೊತೆ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಐತಲಕ್ಕಡಿ ಚಿತ್ರದಲ್ಲಿ ರಂಗಾಯಣ ರಘು ಜೊತೆ ಹೀರೋ ಆಗಿಯೂ ನಟಿಸಿದ್ದ ಬುಲೆಟ್ ಪ್ರಕಾಶ್, ಪತ್ನಿ ಮತ್ತು ಮಗ ರಕ್ಷಕ್ನನ್ನು ಅಗಲಿದ್ದಾರೆ. ಆಪರೇಷನ್ ನಂತರ ಸಿನಿಮಾದಲ್ಲಿ ಅವಕಾಶ ಸಿಗದೆ ಮಾನಸಿಕ ಖಿನ್ನತೆಗೂ ಗುರಿಯಾಗಿದ್ದ ಬುಲೆಟ್ ಪ್ರಕಾಶ್ ಇನ್ನು ನೆನಪು ಮಾತ್ರ.
Also Read :-