ಕೆಜಿಎಫ್ ಚಾಪ್ಟರ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಅಕ್ಟೋಬರ್ 23ಕ್ಕೆ ರಿಲಿಸ್ ಡೇಟ್ ಘೋಷಿಸಿರುವ ಚಿತ್ರತಂಡವೂ ಕೂಡಾ ಈಗ ಕೊರೋನಾ ಬ್ರೇಕ್‍ನಲ್ಲಿದೆ. ಹೀಗಾಗಿಯೇ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಫಸ್ಟ್ ಟೈಂ.
ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳಿದ್ದರೆ ಕೇಳಿ, ಉತ್ತರ ಕೊಡ್ತೇನೆ ಎಂದಿದ್ದೇ ತಡ, ಅಭಿಮಾನಿಗಳು ಮುಗಿ ಬಿದ್ದರು. ಎಲ್ಲರಿಗೂ ತಮ್ಮ ತಮ್ಮ ಮೆಚ್ಚಿನ ಸ್ಟಾರ್ ಬಗ್ಗೆ ಪ್ರಶಾಂತ್ ನೀಲ್ ಏನು ಹೇಳಬಹುದು ಎಂಬ ಕುತೂಹಲ. ಹೀಗಾಗಿಯೇ ಅಂತಹ ಪ್ರಶ್ನೆಗಳೇ ಹೆಚ್ಚಿದ್ದವು.
ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರ ಪತ್ನಿಗೊಂದು ಸಲಹೆಯೂ ಬಂತು.
ಪ್ರಶಾಂತ್ ನೀಲ್ ಅವರಿಗೆ ಕ್ಲೀನ್ ಶೇವ್ ಮಾಡಿಸಿ ಮೇಡಂ, ಸಖತ್ ಸ್ಮಾರ್ಟ್ ಆಗಿ ಕಾಣ್ತಾರೆ ಅನ್ನೋ ಅಭಿಮಾನಿಯೊಬ್ಬರ ಸಲಹೆಗೆ, `ಅವರಿಗೆ ಉದ್ದ ಗಡ್ಡ ಅಂದರೆ ಇಷ್ಟ, ಅದಕ್ಕೇ ಅವರು ಶೇವ್ ಮಾಡೊಲ್ಲ' ಎಂದು ಉತ್ತರ ಕೊಟ್ಟರು ಅವರ ಪತ್ನಿ.
ಪುನೀತ್ ಬಗ್ಗೆ ಒಂದು ಪದದಲ್ಲಿ ಹೇಳಿ ಅನ್ನೋ ಪ್ರಶ್ನೆಗೆ ಸರಿಸಾಟಿಯೇ ಇಲ್ಲದ ಎನರ್ಜಿ ಅಂದ್ರೆ, ಸುದೀಪ್ ಬಗ್ಗೆ ಜೀವನಕ್ಕಿಂತ ದೊಡ್ಡವರು ಎಂದುತ್ತರಿಸಿದ್ದಾರೆ.
ರಾಜಮೌಳಿಗೆ ದಾರಿ ತೋರಿಸುವ ವ್ಯಕ್ತಿ ಎಂದಿದ್ದರೆ, ದಳಪತಿ ವಿಜಯ್ ಅವರನ್ನು ಪವರ್ ಹೌಸ್ ಎಂದಿದ್ದಾರೆ. ಪ್ರಭಾಸ್ ಅವರು ಡಾರ್ಲಿಂಗ್ ಡಾರ್ಲಿಂಗ್.
ಅಂದಹಾಗೆ ಅವರು ಮನೆಯಲ್ಲಿ ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡ್ತಾರಂತೆ.