ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮೂಲಕ ಬೇರೆಯೇ ಆದ ಚಿತ್ರಗಳ ಟ್ರೆಂಡ್ ಸೃಷ್ಟಿಸಿದವರು ನಿರ್ದೇಶಕ ಹೇಮಂತ್ ರಾವ್. ತದನಂತರದ ಕವಲುದಾರಿಯಲ್ಲೂ ಆ್ಯಮ್ ಡಿಫರೆಂಟ್ ಅನ್ನೋದನ್ನು ಸಾಬೀತು ಮಾಡಿ ಗೆದ್ದ ಹೇಮಂತ್ ರಾವ್, ಹಿಂದಿಯಲ್ಲೂ ಛಾಪು ಮೂಡಿಸಿ ಬಂದವರು. ಅಂದಾಧುನ್ ಚಿತ್ರದಲ್ಲಿ ಹೇಮಂತ್ ರಾವ್ ಟಚ್ ಇತ್ತು. ಅವರೀಗ ಮತ್ತೊಮ್ಮೆ ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ. ಸಪ್ತಸಾಗರದಾಚೆ ಎಲ್ಲೋ..
ಮೊದಲಿನ ಪ್ಲಾನ್ ಪ್ರಕಾರ ರಕ್ಷಿತ್-ಹೇಮಂತ್ ಜೋಡಿ ತೆನಾಲಿ ಶುರುವಾಗಬೇಕಿತ್ತು. ಆದರೆ ಆ ಚಿತ್ರಕ್ಕೆ ಇನ್ನೂ ಹೆಚ್ಚಿನ ಸಮಯಾವಕಾಶ ಮತ್ತು ಸಿದ್ಧತೆ ಬೇಕಿರುವ ಕಾರಣ, ಸಪ್ತಸಾಗರದಾಚೆಯೆಲ್ಲೋ ಚಿತ್ರ ಶುರುವಾಗುತ್ತಿದೆ.
ಅದು ಪ್ರಯೋಗಾತ್ಮಕ ಚಿತ್ರವೂ ಹೌದು, ಕಮರ್ಷಿಯಲ್ ಚಿತ್ರವೂ ಹೌದು ಎನ್ನುವ ಹೇಮಂತ್, 75 ದಿನಗಳ ಶೂಟಿಂಗ್ ಪ್ಲಾನ್ ಮಾಡಿದ್ದಾರೆ. ಏಪ್ರಿಲ್ ಹೊತ್ತಿಗೆ ಚಾರ್ಲಿ 777 ಶೂಟಿಂಗ್ ಮುಗಿಸಿದ ನಂತರ ಹೇಮಂತ್ ರಾವ್ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ರಕ್ಷಿತ್ ಶೆಟ್ಟಿ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಆಗಷ್ಟೇ ಕಾಲೇಜು ಮುಗಿಸಿದ ಹುಡುಗ ಹಾಗೂ 10 ವರ್ಷಗಳ ನಂತರದ ಕಾಲೇಜು ಹುಡುಗನ ಗೆಟಪ್ನಲ್ಲಿ ಕಾಣಿಸಲಿದ್ದಾರೆ ಎಂದಿದ್ದಾರೆ ಹೇಮಂತ್ ರಾವ್. ಈ ಚಿತ್ರಕ್ಕೆ ಒನ್ಸ್ ಎಗೇಯ್ನ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಪ್ರೊಡ್ಯೂಸರ್.