ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅವರಿಗೆ ಈ ಬಾರಿ ಮತ್ತೊಮ್ಮೆ ಮೋಸವಾಗಿದೆ. ಅವರಿಗೆ ಖದೀಮರು 1 ಕೋಟಿ 60 ಲಕ್ಷಕ್ಕೆ ಟೋಪಿ ಹಾಕಿದ್ದಾರೆ. ಈಗ ವಂಚಕರ ವಿರುದ್ಧ ಎಸ್.ನಾರಾಯಣ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಆಗಿದ್ದು ಇಷ್ಟೆ, ನಾರಾಯಣ್ ಪುತ್ರ ಪಂಕಜ್ ಅವರನ್ನು ಹೀರೋ ಆಗಿಟ್ಟುಕೊಂಡು ಸಿನಿಮಾ ಮಾಡುತ್ತೇವೆ ಎಂದು ಮೂವರು ನಿರ್ಮಾಪಕರು ಕಳೆದ ವರ್ಷ ನಾರಾಯಣ್ ಅವರ ಸಂಪರ್ಕಕ್ಕೆ ಬಂದರು. ನಾರಾಯಣ್ ಕೂಡಾ ಪಾರ್ಟನರ್ಶಿಪ್ನಲ್ಲಿ ನಿರ್ಮಾಪಕರಾದರು. ಅಭಿಜಿತ್ ಅವರೂ ನಟಿಸುತ್ತಿದ್ದ ಚಿತ್ರವದು. ಸಿನಿಮಾ ಸೆಟ್ಟೇರಿತು ಕೂಡಾ. ಪಂಕಜ್ ಸಂಭಾವನೆ ಎಂದು ಹೆಚ್ಬಿಆರ್ ಲೇಔಟ್ನಲ್ಲೊಂದು ಸೈಟ್ ಕೊಟ್ಟರು ನಿರ್ಮಾಪಕರು. ಆ ಸೈಟ್ನ್ನು ನಾರಾಯಣ್ 1 ಕೋಟಿ 60 ಲಕ್ಷ ಕೊಟ್ಟು ಖರೀದಿಸಿದರು. ಆದರೆ, ಆಮೇಲೆ ಗೊತ್ತಾಗಿದ್ದೆಂದರೆ, ಆ ಸೈಟ್ ದಾಖಲೆಯೇ ನಕಲಿ ಎನ್ನುವ ಸತ್ಯ.
ಬೋಗಸ್ ದಾಖಲೆ ನೋಡಿ ಒಂದೂವರೆ ಕೋಟಿ ಸಾಲ ಮಾಡಿ ಖರೀದಿಸಿರುವ ಸೈಟ್ಗೆ ಈಗ ನಾರಾಯಣ್ ಕಂತು ಕಟ್ಟಲೇಬೇಕು. ಏನು ಮಾಡಲಿ ಎಂದು ತಲೆ ಮೇಲೆ ಕೈ ಹೊತ್ತಿರುವ ನಾರಾಯಣ್, ಪೊಲೀಸರ ಮೊರೆ ಹೋಗಿದ್ದಾರೆ.