ಜಂಟಲ್ಮನ್ ಚಿತ್ರದ ಕಥೆ ಏನಿರಬಹುದು ಎಂದು ನೋಡಿದರೆ, ಪದೇ ಪದೇ ಕೇಳಿಬರೋ ಆ ಕಾಯಿಲೆಯ ಹೆಸರು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತೆ. ಕೆಲವರಿಗೆ ಎಲ್ಲಿ ಕುಳಿತರೂ ನಿದ್ದೆ, ಆಕಳಿಕೆ.. ಕಣ್ಣು ಮುಚ್ಚಿದರೆ ಗೊರಕೆ ಬರುತ್ತೆ. ಇನ್ನೂ ಕೆಲವರು ಓಡಾಡುತ್ತಿದ್ದರೂ ನಿದ್ದೆಯ ಮೂಡಿನಲ್ಲೇ ಇರುತ್ತಾರೆ. ಒಂದು ವಿಷಯ ಗೊತ್ತಿರಲಿ, ಈ ಒಂದು ಕಾಯಿಲೆಯಲ್ಲೇ 70ಕ್ಕೂ ಹೆಚ್ಚು ಥರಾವರಿ ವಿಧಗಳಿವೆ. ಜಂಟಲ್ಮನ್ ಹೀರೋ ಪ್ರಜ್ವಲ್ ದೇವರಾಜ್ಗೆ ಈ 70ರಲ್ಲಿ 18 ಗಂಟೆ ನಿದ್ರೆ ಮಾಡೋ ಕಾಯಿಲೆ. ಎಚ್ಚರ ಇರೋಕೆ ಸಾಧ್ಯವಾಗೋದು ದಿನದಲ್ಲಿ 6 ಗಂಟೆ ಮಾತ್ರ.
ಅಂತಹ ಪ್ರಜ್ವಲ್ ದೇವರಾಜ್ಗೆ ಲವ್ವಾಗುತ್ತೆ. ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಅಣ್ಣನ ಮಗಳು ಕಿಡ್ನಾಪ್ ಆಗ್ತಾಳೆ. ನಾಯಕಿಯ ಲೈಫಲ್ಲಿ ಏನೇನೋ ಆಗುತ್ತೆ. ಬಗೆಹರಿಸಲು ಹೋದವನು ಇನ್ನೇನೋ ತೊಂದರೆಯಲ್ಲಿ ಸಿಕ್ಕಿಕೊಳ್ಳುತ್ತಾನೆ. ತನ್ನವರನ್ನು ರಕ್ಷಿಸಿಕೊಳ್ಳಬೇಕೆಂದರೆ ಹೋರಾಡಲೇಬೇಕು. ಆದರೆ, ಅದಕ್ಕೂ ಮೊದಲು ಅವನು ತನ್ನ ಕಾಯಿಲೆಯನ್ನು ಗೆಲ್ಲಬೇಕು. ಹೇಗೆ..ಹೇಗೆ..ಹೇಗೆ..
ಸ್ವಲ್ಪ ದಿನ ಸುಮ್ಮನಿರಿ, ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದ್ದಾನೆ ಜಂಟಲ್ಮನ್.
ಜಡೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗುರು ದೇಶಪಾಂಡೆ ನಿರ್ಮಾಪಕ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಮಾನವ ಕಳ್ಳ ಸಾಗಣೆ ಮತ್ತು ವೀರ್ಯಾಣು ದಂಧೆಯ ಕಥೆ ಇದೆ.