ಜೆಂಟಲ್‍ಮನ್, ಟ್ರೇಲರ್ ಮತ್ತು ಸ್ಪೆಷಲ್ ಕಥೆಯ ಮೂಲಕ ಗಮನ ಸೆಳೆದಿರುವ ಚಿತ್ರ. ಪ್ರಜ್ವಲ್ ದೇವರಾಜ್ ಸಿನಿ ಕೆರಿಯರ್‍ನಲ್ಲೇ ಒಂದು ಡಿಫರೆಂಟ್ ಕಥಾ ಹಂದರದ ಚಿತ್ರ ಎನ್ನುವ ಕಾರಣಕ್ಕೆ ಗಮನ ಸೆಳೆದಿದೆ. ಈ ಚಿತ್ರಕ್ಕೆ ನಿರ್ದೇಶಕ ಜಡೇಶ್ ಕುಮಾರ್. ಕಥೆಯೂ ಅವರದ್ದೆ.
ಜಡೇಶ್ ಕುಮಾರ್ ಮೂಲತಃ ಹಂಪಿಯ ಹುಡುಗ. ಸಿನಿಮಾ ಮಾಡಬೇಕು ಎನ್ನುವ ಹುಚ್ಚಿನಲ್ಲಿ ಗಾಂಧಿನಗರಕ್ಕೆ ಬಂದವರು ಗುರು ದೇಶಪಾಂಡೆ ಕಣ್ಣಿಗೆ ಬಿದ್ದರು. ಅವರ ಜೊತೆ ಅಸಿಸ್ಟೆಂಟ್ ಆದರು. ರಾಜಾಹುಲಿ, ರುದ್ರತಾಂಡವ ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ಜಡೇಶ್, ರಾಜಹಂಸ ಚಿತ್ರದ ಮೂಲಕ ನಿರ್ದೇಶಕರೂ ಆದರು.
`ರಾಜಹಂಸ ಚಿತ್ರಕ್ಕೆ, ಕಥೆಗೆ ಮೆಚ್ಚುಗೆಯೇನೋ ಸಿಕ್ಕಿತು. ಆದರೆ, ಪ್ರೇಕ್ಷಕ ಬೆಂಬಲ ಸಿಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಅದೊಂದು ಫ್ಲಾಪ್ ಸಿನಿಮಾ. ಅದು ನಾನು ಎಲ್ಲಿ ಎಡವಿದ್ದೆ, ಏನು ಮಾಡಬೇಕಿತ್ತು ಎಂಬುದನ್ನು ಚೆನ್ನಾಗಿ ಹೇಳಿಕೊಟ್ಟಿತು. ಆಗ ಹೊಳೆದಿದ್ದೇ ಈ ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿಯ ಕಥೆ. ಬರೀ ಕಾಯಿಲೆಯಷ್ಟೇ ಆದರೆ ಥ್ರಿಲ್ ಇರಲ್ಲ ಎನ್ನುವ ಕಾರಣಕ್ಕೆ ವೀರ್ಯಾಣು ಮಾಫಿಯಾ ಕಥೆ ಸೇರಿಸಿದೆ. ಆ ಮಾಫಿಯಾ ವಿರುದ್ಧ ದಿನಕ್ಕೆ 6 ಗಂಟೆಯಷ್ಟೇ ಎಚ್ಚರ ಇರಲು ಸಾಧ್ಯವಿರುವ ನಾಯಕ ಹೇಗೆ ಹೋರಾಡಬಹುದು ಎನ್ನುವ ಕಲ್ಪನೆಯನ್ನಿಟ್ಟುಕೊಂಡೇ ಚಿತ್ರಕಥೆ ಹೆಣೆದೆ. ಈಗ ಚಿತ್ರ ಅದ್ಭುತವಾಗಿ ಮೂಡಿಬಂದಿದೆ' ಎನ್ನುತ್ತಾರೆ ಜಡೇಶ್.
ಶಿಷ್ಯನ ವಿಭಿನ್ನ ಕಥೆ ಮತ್ತು ಸಾಹಸಕ್ಕೆ ಹಣ ಹೂಡುವ ಮೂಲಕ ಬೆನ್ನೆಲುಬಾಗಿರುವುದು ಗುರುದೇಶಪಾಂಡೆ. ಪ್ರಜ್ವಲ್ ದೇವರಾಜ್ ಎದುರು ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದು, ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿದ್ದಾರೆ.