ಕನ್ನಡ ಚಿತ್ರರಂಗ ಈ ಬಾರಿಯೂ 200 ಚಿತ್ರಗಳ ಗಡಿ ದಾಟುವುದು ಪಕ್ಕಾ. ರಿಲೀಸ್ ಆಗಿರುವ ಚಿತ್ರಗಳ ಸಂಖ್ಯೆ ಈಗಾಗಲೇ 150 ಚಿತ್ರಗಳ ಗಡಿ ದಾಟಿದೆ. ಇದರ ನಡುವೆಯೇ ಇನ್ನೊಂದು ಹೊಚ್ಚ ಹೊಸ ದಾಖಲೆ ಬರೆದಿದೆ ಕನ್ನಡ ಚಿತ್ರರಂಗ. ಅಕ್ಟೋಬರ್ ತಿಂಗಳಲ್ಲಿ ಸೆನ್ಸಾರ್ ಆಗಿರುವ ಕನ್ನಡ ಚಿತ್ರಗಳ ಸಂಖ್ಯೆ ಬರೋಬ್ಬರಿ 132.
ಸೆನ್ಸಾರ್ ಬೋರ್ಡ್ ಅಧಿಕಾರಿ ಶ್ರೀನಿವಾಸಪ್ಪ ಎದುರು ಈ ವರ್ಷ ಬಂದಿರವು ಒಟ್ಟು ಚಿತ್ರಗಳ ಸಂಖ್ಯೆ 400ಕ್ಕೂ ಹೆಚ್ಚು. 2018ರಲ್ಲಿ 300ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್ ಆಗಿದ್ದವು. ಈ ಬಾರಿ 400ರ ಗಡಿ ದಾಟಿದೆ. ಇದು ಕನ್ನಡ ಚಿತ್ರರಂಗಕ್ಕೆ ಎಚ್ಚರಿಕೆ ಗಂಟೆ ಎನ್ನುತ್ತಾರೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಮತ್ತು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು.
ಹಾಗೆಂದು ಸೆನ್ಸಾರ್ ಆದ ಚಿತ್ರಗಳೆಲ್ಲ ರಿಲೀಸ್ ಆಗುವುದಿಲ್ಲ. ಬಹುತೇಕರು ಕೇವಲ ಸಬ್ಸಿಡಿಗಾಗಿ ಚಿತ್ರಗಳನ್ನು ಸೆನ್ಸಾರ್ ಮಾಡಿಸುತ್ತಾರೆ ಎಂಬ ಆಘಾತಕಾರಿ ಅಂಶವೂ ಇದರ ಹಿಂದಿದೆ. ಹೆಚ್ಚುತ್ತಿರುವ ಸಿನಿಮಾಗಳಿಂದಾಗಿ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಪ್ರತಿದಿನ 10ರಿಂದ 15 ಸಿನಿಮಾ ನೋಡುತ್ತಿದ್ದಾರಂತೆ. ಏಕೆಂದರೆ ನಿಯಮಗಳ ಪ್ರಕಾರ ಸಿನಿಮಾಗಳನ್ನು ಪೆಂಡಿಂಗ್ ಉಳಿಸಿಕೊಳ್ಳುವಂತಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ತನ್ನದೇ ದಾಖಲೆಯನ್ನು ತಾನೇ ಮುರಿಯಲು ಹೊರಟಿದೆ. ಇದರಿಂದ ಚಿತ್ರರಂಗಕ್ಕೆ ಲಾಭಾನಾ..? ನಷ್ಟಾನಾ..? ಗೊತ್ತಿಲ್ಲ. ದಾಖಲೆಯಂತೂ ಸೃಷ್ಟಿಯಾಗಿದೆ.