ರಶ್ಮಿಕಾ ಮಂದಣ್ಣ, ಈಗ ಸೌಥ್ ಇಂಡಿಯಾ ಕ್ರಶ್. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈಗ ತಮಿಳಿಗೂ ಕಾಲಿಟ್ಟಿದ್ದಾರೆ. ಇಷ್ಟೆಲ್ಲ ಫೇಮಸ್ ಆಗಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲ್ಗೆ ಗುರಿಯಾಗಿರುವ ನಟಿ ರಶ್ಮಿಕಾ. ಕೆಲವಂತೂ ಹೊಲಸು ಭಾಷೆಯಲ್ಲಿ, ಕೀಳು ಅಭಿರುಚಿಯಲ್ಲಿರುತ್ತವೆ. ಇತ್ತೀಚೆಗೆ ರಶ್ಮಿಕಾ ತಮ್ಮ ಬಾಲ್ಯದ ದಿನಗಳದ್ದೊಂದು ಫೋಟೋ ಪೋಸ್ಟ್ ಮಾಡಿದ್ದರು. ಮುದ್ದು ಮುದ್ದಾಗಿ ಕಾಣುವ ಪುಟಾಣಿ ರಶ್ಮಿಕಾ ಫೋಟೋವನ್ನೂ ಬಿಡದೆ ಕೆಟ್ಟ ಕೆಟ್ಟ ಭಾಷೆಯಲ್ಲಿ ಟ್ರೋಲ್ ಮಾಡಲಾಗಿದೆ. ಹೀಗಾಗಿಯೇ ಈ ಬಾರಿ ರಶ್ಮಿಕಾ ಗರಂ ಆಗಿದ್ದಾರೆ.
‘ನಟರ ಬಗ್ಗೆ ಕಮೆಂಟ್ ಮಾಡೋದ್ರಿಂದ ನಿಮಗೇನು ಸಿಗುತ್ತೋ ನನಗೆ ಗೊತ್ತಿಲ್ಲ. ಬಹುಶಃ, ಕಮೆಂಟ್ ಮಾಡೋಕೆ ನಾವು ಸುಲಭವಾಗಿ ಸಿಗುತ್ತೇವೆ ಎನ್ನುವುದೇ ಕಾರಣ ಇರಬೇಕು. ಪಬ್ಲಿಕ್ ಫಿಗರ್ ಆದ ತಕ್ಷಣ ನೀವು ಹೇಗೆ ಬೇಕಾದರೂ ನಿರ್ಲಜ್ಜವಾಗಿ ಮಾತನಾಡಬಹುದು. ಟಾರ್ಗೆಟ್ ಮಾಡಬಹುದು ಎಂದಲ್ಲ. ಅನೇಕರು ಇಂಥ ಕೆಟ್ಟ ಕಾಮೆಂಟ್ಸ್, ಟ್ರೋಲ್ಸ್ನ್ನು ನಿರ್ಲಕ್ಷಿಸಿ ಎನ್ನುತ್ತಿದ್ದಾರೆ. ನಾನೂ ಅದನ್ನೇ ಮಾಡಿದ್ದೇನೆ.
ನಮ್ಮ ಕೆಲಸದ ಬಗ್ಗೆ ಏನಾದರೂ ಹೇಳುವುದಿದ್ದರೆ.. ಖಂಡಿತಾ ಹೇಳಿ, ನಿಮಗೆ ನಮ್ಮ ವೃತ್ತಿಯ ಬಗ್ಗೆ ಮಾತನಾಡೋಕೆ ಹಕ್ಕಿದೆ. ಆದರೆ, ನಮ್ಮ ವೈಯಕ್ತಿಕ ಬದುಕು, ಕುಟುಂಬದ ವಿಷಯದಲ್ಲಿ ಮಾತನಾಡುವ ಹಕ್ಕು ನಿಮಗ್ಯಾರಿಗೂ ಇಲ್ಲ. ಪ್ರತಿ ವೃತ್ತಿಗೂ ಒಂದು ಗೌರವವಿದೆ. ಮನುಷ್ಯರಾದವರು ಪರಸ್ಪರ ಗೌರವಿಸೋದನ್ನು ಕಲಿಯಬೇಕು ಎಂದಿದ್ದಾರೆ ರಶ್ಮಿಕಾ. ಚಿತ್ರರಂಗದ ಹಲವರು ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ.