ಆಯುಷ್ಮಾನ್ ಭವ, ಈಗ ರಿಲೀಸ್ಗೆ ಕಂಪ್ಲೀಟ್ ರೆಡಿ. ಶಿವರಾಜ್ ಕುಮಾರ್ ಇದೇ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರಿನಲ್ಲಿ ನಟಿಸಿರುವ ಚಿತ್ರವಿದು. ಪಿ.ವಾಸು, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಕಾಂಬಿನೇಷನ್ ಇರುವ ಸಿನಿಮಾ. ಹೀಗಾಗಿ ನಿರೀಕ್ಷೆಗಳೋ.. ಮೌಂಟ್ ಎವರೆಸ್ಟ್ ಲೆಕ್ಕದಲ್ಲಿವೆ. ಇಷ್ಟಿದ್ದರು ಸಿನಿಮಾ ಅಂದುಕೊಂಡಂತೆ ರಿಲೀಸ್ ಮಾಡಲು ಆಗಿರಲಿಲ್ಲ.
ಚಿತ್ರದಲ್ಲಿ ಬಳಸಿದ್ದ ಗ್ರಾಫಿಕ್ಸ್ ಟೈಗರ್ ದೃಶ್ಯಕ್ಕೂ ಅನಿಮಲ್ ಬೋರ್ಡ್ ಅನುಮತಿ ಬೇಕಿದ್ದ ಕಾರಣ, ಸೆನ್ಸಾರ್ ತಡವಾಗಿತ್ತು. ಈಗ ಎಲ್ಲ ಕ್ಲಿಯರ್ ಆಗಿ ಬರುತ್ತಿದೆ. ಈ ಕುರಿತು ಮಾತನಾಡಿದ್ದ ಶಿವಣ್ಣ ನವೆಂಬರ್ 1ರಂದು ರಿಲೀಸ್ ಮಾಡುವಂತೆ ನಾನೇ ಹೇಳಿದ್ದೆ. ಯೋಗಿಯೂ ಅದಕ್ಕಾಗಿ ಕೆಲಸ ಮಾಡಿದ್ದರು. ಆದರೆ, ಆಗಲಿಲ್ಲ. ಅಭಿಮಾನಿಗಳ ನಿರೀಕ್ಷೆ ಸುಳ್ಳಾಯ್ತು. ಅದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ ಎಂದಿದ್ದರು.
ಇದಕ್ಕೆ ಅಭಿಮಾನಿಗಳೂ ಅಷ್ಟೇ ಬೊಂಬಾಟ್ ಉತ್ತರ ಕೊಟ್ಟಿದ್ದಾರೆ. ಕ್ಷಮೆ ಕೇಳೋಕೆ ನೀವು ತಪ್ಪು ಮಾಡಿಲ್ಲ. ಸಿನಿಮಾ ಲೇಟ್ ಆದರೂ ನಾವು ನೋಡಿಯೇ ನೋಡ್ತೇವೆ. ಚಿತ್ರ ಖಂಡಿತಾ ಚೆನ್ನಾಗಿರುತ್ತೆ. ಇಂಥದ್ದಕ್ಕೆಲ್ಲ ನೀವು ಕ್ಷಮೆ ಕೇಳಬಾರದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಉತ್ತರಿಸಿದ್ದಾರೆ. ಇನ್ನೂ ಕೆಲವರು ಎಷ್ಟಂದ್ರೂ ನೀವು ಅಣ್ಣಾವ್ರ ಮಗ. ಅದಕ್ಕೇ ಕ್ಷಮೆ ಕೇಳಿದ್ದೀರಿ. ಗ್ರೇಟ್ ಸರ್. ಡೋಂಟ್ ವರಿ ಎಂದು ಸಮಾಧಾನ ಹೇಳಿದ್ದಾರೆ. ಯಥಾ ಸ್ಟಾರ್.. ತಥಾ ಫ್ಯಾನ್ಸ್..